ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನೆಗಳಲ್ಲಿ ಮಿತಿಗಿಂತ ಹೆಚ್ಚು ಮದ್ಯ ಸಂಗ್ರಹಕ್ಕೆ ಪ್ರತ್ಯೇಕ ನೀತಿ ಬೇಕಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ಹಳ್ಳಿಗಳಲ್ಲಿ ಅಕ್ರಮ ಮದ್ಯಕ್ಕೆ ಕಡಿವಾಣ ಹಾಕುವಂತೆ ಅಬಕಾರಿ ಸಚಿವರಿಗೆ ಶಾಸಕ ಸಿ.ಬಿ.ಸುರೇಶ್ ಬಾಬು ಮನವಿ ಮಾಡಿದರು. ಈ ವೇಳೆ ಶಾಸಕ ಸುರೇಶ್ ಬಾಬು ಆನ್ಲೈನ್ ಮೂಲಕ ಮದ್ಯ ಮಾರಾಟಕ್ಕೆ ಸರ್ಕಾರ ಚಿಂತನೆ ಮಾಡಬೇಕು ಎಂದು ಅಬಕಾರಿ ಸಚಿವರಾದ ಆರ್.ಬಿ ತಿಮ್ಮಾಪುರಗೆ ಒತ್ತಾಯಿಸಿದರು. ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿದರು.
ಮನೆಗಳಲ್ಲೂ ಏಳೆಂಟು ಬಾಟಲ್ಗಳಿಗಿಂತ ಹೆಚ್ಚು ಮದ್ಯ ಸಂಗ್ರಹ ಮಾಡಬಾರದು ಎನ್ನುವ ನಿಯಮವಿದೆ. ಮನೆಗೆ ಬಂದವರೆಲ್ಲಾ ಒಂದೊಂದು ಬಾಟಲ್ ನೀಡುತ್ತಿರುತ್ತಾರೆ. ಆದಾಯ ತೆರಿಗೆ ಇಲಾಖೆ ಸೇರಿದಂತೆ ಅನೇಕರು ಬಂದು ಇದಕ್ಕೂ ಒಂದು ಕೇಸ್ ದಾಖಲು ಮಾಡುತ್ತಿದ್ದಾರೆ. ಆದ ಕಾರಣಕ್ಕೆ ಮನೆಯಲ್ಲಿ ಸಂಗ್ರಹ ಮಾಡುವುದಕ್ಕೂ ಪ್ರತ್ಯೇಕ ಅಧಿಕೃತ ಮುದ್ರೆ ಒತ್ತುವ ಬಗ್ಗೆ ಚರ್ಚೆ ನಡೆಸಬೇಕಿದೆ ಎಂದರು.
ಅಮೆಜಾನ್, ಸ್ವಿಗ್ಗಿ ಸೇರಿದಂತೆ ಅನೇಕ ಕಂಪನಿಗಳು ತರಕಾರಿ, ಮಾತ್ರೆ ಸೇರಿದಂತೆ ಅಗತ್ಯ ವಸ್ತುಗಳನ್ನು ಫೋನ್ ಮಾಡಿದರೆ ಸಾಕು ಮನೆ ಬಾಗಿಲಿಗೆ ತಂದುಕೊಡುತ್ತಾರೆ. ಇವರುಗಳೇ ಲಿಕ್ಕರ್ ಶಾಪ್ಗಳಿಗೆ ತೆರಳಿ ಮದ್ಯ ತಂದುಕೊಡುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿಯಿದೆ?. ಇದರ ಬಗ್ಗೆ ನಾನೂ ಎಷ್ಟೋ ಕಡೆ ಕೇಳಿದ್ದೇನೆ. ಇದರ ಬಗ್ಗೆ ಮುಖ್ಯಮಂತ್ರಿಯವರಿಗೂ ಒಮ್ಮೆ ಹೇಳುತ್ತಿದ್ದೆ ಎಂದರು.

