ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಧರ್ಮಸ್ಥಳದ ಸಮಾಧಿ ಶೋಧ ತನಿಖೆ ತೀವ್ರ ಸದ್ದು ಮಾಡುತ್ತಿರುವ ನಡುವೆಯೇ ಗುರುವಾರ ಸಂಜೆ ಇದೇ ಪರಿಸರದಲ್ಲಿ ಅಹಿತಕರ ಘಟನೆಯೊಂದು ನಡೆದಿದೆ.
ಧರ್ಮಸ್ಥಳ ಗ್ರಾಮದ ನೇತ್ರಾವತಿ ನದಿ ತೀರದ ಪಾಂಗಳ ಪರಿಸರದಲ್ಲಿ ಮೂರು ಮಂದಿ ಯೂಟ್ಯೂಬರ್ಸ್ ಹಾಗೂ ಗುಂಪುಗಳ ನಡುವೆ ಮಾತಿನ ಚಕಮಕಿ, ಹಲ್ಲೆ ನಡೆದಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಜನ ಗುಂಪುಗೂಡಿದ್ದು, ಪರಿಸ್ಥಿತಿ ನಿಯಂತ್ರಣ ತಪ್ಪುವ ಸಾಧ್ಯತೆ ಗೋಚರಿಸಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠೀ ಪ್ರಹಾರ ಕೂಡಾ ನಡೆಸಿದ್ದಾರೆ. ಆದರೂ ಜನ ಚದುರದಿರುವ ಕಾರಣ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ಕರೆತರಲಾಗಿದ್ದು, ಎಲ್ಲೆಡೆ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ.
ಸುದ್ದಿ ವ್ಯಾಪಿಸುತ್ತಿದ್ದಂತೆಯೇ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುತ್ತಿದ್ದು, ಜನರ ನಿಯಂತ್ರಣ ಪೊಲೀಸರಿಗೆ ಸವಾಲಾಗಿ ಕಾಡಿದೆ.