ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಗಿಲು ಕ್ರಾಸ್ ಬಳಿಯ ಸರ್ಕಾರದ ಜಾಗದಲ್ಲಿ ಅಕ್ರಮ ಮನೆಗಳ ನಿರ್ಮಾಣ ವಿಚಾರದಲ್ಲಿ ತೀವ್ರ ಪರ-ವಿರೋಧ ವ್ಯಕ್ತವಾಗುತ್ತಿದೆ. ಮೊದಲು ಬೆಂಗಳೂರಿನಲ್ಲಿರುವ ಅಧಿಕೃತ ಸ್ಲಂಗಳ ಬಗ್ಗೆ ಯಾರು ಕ್ರಮ ಕೈಗೊಂಡಿದ್ದಾರೆ? ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪ್ರಶ್ನಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿ, ಕೋಗಿಲು ಕ್ರಾಸ್ನಲ್ಲಿ ಅಕ್ರಮ ಮನೆಗಳ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಅಲ್ಲಿ ಕೇರಳದವರಿದ್ದಾರೆ ಎಂದು ನನಗೆ ಅನ್ನಿಸುವುದಿಲ್ಲ. ಬದಲಾಗಿ ಬಾಂಗ್ಲಾದವರು ಇರಬಹುದು. ಈ ಒಂದು ಜಾಗದ ವಿಚಾರದಲ್ಲಿ ಕೇರಳ ಹಾಗೂ ಕರ್ನಾಟಕದ ಮುಖ್ಯಮಂತ್ರಿಗಳು ಪರ- ವಿರೋಧ ಹೇಳಿಕೆ ನೀಡುವ ಮೂಲಕ ವಿಜೃಂಭಿಸಿಕೊಳ್ಳುತ್ತಿದ್ದಾರೆ.
ನಾನು ಖುದ್ದು ವ್ಹೀಲ್ ಚೇರ್ನಲ್ಲಿ ಬರುತ್ತೇನೆ. ನನ್ನ ಜೊತೆ ಬನ್ನಿ ಬೆಂಗಳೂರಲ್ಲಿ ಅನಧಿಕೃತ ಎಷ್ಟು ಸ್ಲಂಗಳಿವೆ ಎಂಬುದರ ಬಗ್ಗೆ, ಸ್ಲಂಗಳಲ್ಲಿ ಎಲ್ಲಿಂದ ಜನರು ಬಂದಿದ್ದಾರೆ ಎಂಬುದರ ಕುರಿತು ನೋಡೋಣ. ಇದುವರೆಗೂ ಅನಧಿಕೃತ ಸ್ಲಂಗಳ ಬಗ್ಗೆ ಯಾರಾದರೂ ಕ್ರಮ ಕೈಗೊಂಡಿದ್ದಾರಾ? ಎಂದು ಪ್ರಶ್ನಿಸಿದರು.
ಅಕ್ರಮ ಮನೆಗಳ ತೆರವು ವಿಚಾರದ ಕುರಿತು ಬಿಜೆಪಿ -ಕಾಂಗ್ರೆಸ್ ನಾಯಕರ ಸಂಘರ್ಷ ಮಿತಿ ಮೀರಿ ಹೋಗಿದೆ. ನಾನು 18 ತಿಂಗಳ ಕಾಲ ಮುಖ್ಯಮಂತ್ರಿ ಗಾದಿಯಲ್ಲಿರುವಾಗ ನಂದಿನಿ ಲೇಔಟ್ ಬಳಿ 800 ಮನೆಗಳನ್ನು ಒಡೆಯಲು ಬುಲ್ಡೋಜರ್ ಹೋಗಿತ್ತು. ಬೆಳಗ್ಗೆ 6 ಗಂಟೆಗೆ ಸ್ಥಳಕ್ಕೆ ಹೋಗಿ ಪರಿಶೀಲಿಸಿ ಮನೆ ಕೆಡವದಂತೆ ತಪ್ಪಿಸಿದ್ದೆ. ಈ ಜಾಗದಲ್ಲಿ ಹಣ ಕೊಟ್ಟವರಿಗೆ ಪರ್ಯಾಯವಾಗಿ ಬೇರೆ ಕಡೆ ಮನೆ ಕಟ್ಟಿಸಿಕೊಡುವಂತೆ ಆದೇಶಿಸಿದ್ದೆ ಎಂದು ಮೆಲುಕು ಹಾಕಿದರು.

