ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ನಟ ದರ್ಶನ್ ಮತ್ತು ಇತರ 16 ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಅಪರಿಚಿತ ವ್ಯಕ್ತಿಯೊಬ್ಬ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಮುಂದಾದ ಘಟನೆ ಬುಧವಾರ ನಡೆದಿದೆ. ಆದರೆ, ನ್ಯಾಯಾಧೀಶರು ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ನನ್ನು ದರ್ಶನ್ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ ಸಂಬಂಧ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ಇಂದು (ಸೆಪ್ಟೆಂಬರ್ 03) ಬೆಂಗಳೂರಿನ 64ನೇ ಸೆಷನ್ ಕೋರ್ಟ್ ವಿಚಾರಣೆ ನಡೆಸುವ ವೇಳೆ ಅಪರಿಚಿತವ ವ್ಯಕ್ತಿ ನುಗ್ಗಿ ಬಂದಿದ್ದಾನೆ. ಇದರಿಂದ ಕೆಲ ಕಾಲ ಗೊಂದಲಕ್ಕೆ ಕಾರಣವಾಯಿತು.
ಅಪರಿಚಿತ ವ್ಯಕ್ತಿ, ದರ್ಶನ್ ಸೇರಿ ಪ್ರಕರಣದಲ್ಲಿ ಭಾಗಿಯಾಗಿರುವ 17 ಜನರಿಗೂ ಮರಣದಂಡನೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿ, ಅರ್ಜಿಯನ್ನು ನ್ಯಾಯಾಧೀಶರಿಗೆ ನೀಡಲು ಪ್ರಯತ್ನಿಸಿದ್ದಾನೆ.
ನ್ಯಾಯಾಧೀಶರು, ‘ಯಾರು ನೀನು?’ ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಆ ವ್ಯಕ್ತಿ, ‘ನಾನು ರವಿ ಬೆಳಗೆರೆ ಕಡೆಯವನು’ ಎಂದು ಹೇಳಿದ್ದಾರೆ. ಈ ಉತ್ತರದಿಂದ ನ್ಯಾಯಾಧೀಶರು, ‘ಯಾರ್ಯಾರೋ ನೀಡುವ ಅರ್ಜಿಯನ್ನು ಪಡೆಯಲು ಸಾಧ್ಯವಿಲ್ಲ’ ಎಂದು ಹೇಳಿ ಆ ವ್ಯಕ್ತಿಯ ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ.
ನ್ಯಾಯಾಲಯದ ಈ ನಿರ್ಧಾರದ ನಂತರ ಆ ವ್ಯಕ್ತಿ ಕೋರ್ಟ್ ಹಾಲ್‌ನಿಂದ ಹೊರಗೆ ಹೋದರು. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ನಿಯಮದ ಪ್ರಕಾರವೇ ನಡೆಸಬೇಕು ಮತ್ತು ಹೊರಗಿನ ವ್ಯಕ್ತಿಗಳ ಮಧ್ಯಪ್ರವೇಶಕ್ಕೆ ಅವಕಾಶವಿಲ್ಲ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದ್ದಾರೆ.