ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲುಗು ಚಿತ್ರರಂಗದ ಪವರ್‌ಫುಲ್ ನಟ ಹಾಗೂ ಆಂಧ್ರ ಪ್ರದೇಶದ ಹಿಂದೂಪುರ ಶಾಸಕ ನಂದಮೂರಿ ಬಾಲಕೃಷ್ಣ, ತಮ್ಮ ಅಭಿನಯದಷ್ಟೇ ಸಮಾಜ ಸೇವೆಯಲ್ಲಿಯೂ ಜನಮನ ಗೆದ್ದಿದ್ದಾರೆ. ತೆಲಂಗಾಣದಲ್ಲಿ ಇತ್ತೀಚೆಗೆ ಭಾರಿ ಮಳೆಯಿಂದ ಉಂಟಾದ ಪ್ರವಾಹ ಪರಿಸ್ಥಿತಿ ಜನರನ್ನು ಸಂಕಷ್ಟಕ್ಕೆ ತಳ್ಳಿದೆ. ಈ ಸಂದರ್ಭದಲ್ಲಿ ಬಾಲಯ್ಯ ಮಾನವೀಯ ಮುಖ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಅವರು ಪಕ್ಷ ರಾಜಕೀಯ ಮೀರಿಸಿ, ಪ್ರವಾಹ ಪೀಡಿತರಿಗೆ ನೆರವಿನ ಹಸ್ತ ಚಾಚಿದ್ದಾರೆ.
ಸಿಎಂ ಪರಿಹಾರ ನಿಧಿಗೆ ನೆರವು
ತೆಲಂಗಾಣದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಬಾಲಯ್ಯ ನೇರವಾಗಿ 50 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಇತ್ತೀಚೆಗೆ ಅವರಿಗೆ ‘ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಲಂಡನ್’ನಿಂದ ಸಿನಿಮಾ ಹಾಗೂ ಸಮಾಜ ಸೇವೆಯ ಗುರುತಿನ ಸನ್ಮಾನ ದೊರೆತಿತ್ತು. ಆ ಸಂದರ್ಭದಲ್ಲಿ ಮಾತನಾಡಿದ ಅವರು, “ಪ್ರವಾಹ ಪೀಡಿತರಿಗೆ ಸಹಾಯವಾಗಲೆಂದು 50 ಲಕ್ಷ ರೂ. ದೇಣಿಗೆ ನೀಡುತ್ತಿದ್ದೇನೆ” ಎಂದು ಘೋಷಿಸಿದರು.
ವೇದಿಕೆಯಲ್ಲಿ ಮಾತನಾಡಿದ ಬಾಲಯ್ಯ, “ಇದು ರಾಜಕೀಯ ಅಲ್ಲ, ಇದು ಪ್ರಜಾ ಸೇವೆ. ನನ್ನ ತಂದೆ ಎನ್.ಟಿ. ರಾಮಾರಾವ್ ರಾಯಲಸೀಮ ಬರ ನಿವಾರಣೆಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಅವರ ದಾರಿಯಲ್ಲಿ ನಾನೂ ನಡೆಯುತ್ತಿದ್ದೇನೆ. ಪ್ರವಾಹದಲ್ಲಿ ಜನರು ಆಸ್ತಿ, ರೈತರು ಬೆಳೆ ಕಳೆದುಕೊಂಡಿದ್ದಾರೆ. 50 ಲಕ್ಷ ರೂ. ದೇಣಿಗೆಯಿಂದ ದೊಡ್ಡ ಬದಲಾವಣೆ ಆಗುವುದಿಲ್ಲ, ಆದರೆ ಮುಂದೆಯೂ ಸಹ ಜನರ ನೆರವಿಗೆ ನಿಲ್ಲುತ್ತೇನೆ” ಎಂದರು.
ಅವರು ತಮ್ಮ ಅಭಿಮಾನಿಗಳ ಬಗ್ಗೆ ಮಾತಾಡುತ್ತಾ, “ಜನರಿಗೆ ಯಾವಾಗ ಸಮಸ್ಯೆ ಬಂದರೂ ನನ್ನ ಅಭಿಮಾನಿಗಳು ಯಾವುದೇ ಫಲಾಪೇಕ್ಷೆ ಇಲ್ಲದೆ ಧಾವಿಸುತ್ತಾರೆ ಎಂಬ ವಿಶ್ವಾಸ ನನಗೆ ಇದೆ. ನಾನು ಅವರ ಬೆಂಬಲವಾಗಿ ಯಾವಾಗಲೂ ಇರುತ್ತೇನೆ” ಎಂದು ತಿಳಿಸಿದರು.