ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಮ್ಯಾಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣ ದಿನದಿಂದ ದಿನಕ್ಕೆ ಗಂಭೀರ ರೂಪ ಪಡೆದುಕೊಳ್ಳುತ್ತಿದೆ. ಈಗಾಗಲೇ ಹಲವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಮತ್ತಷ್ಟು ಆರೋಪಿಗಳನ್ನು ಪತ್ತೆಹಚ್ಚಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ. ಇತ್ತೀಚಿನ ಬಂಧನದೊಂದಿಗೆ ಆರೋಪಿತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.
ಬಿಜಾಪುರ, ಚಿತ್ರದುರ್ಗ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಒಂಬತ್ತು ಮಂದಿಯನ್ನು ಬಂಧಿಸಿದ್ದ ಪೊಲೀಸರು, ಇದೀಗ ಉತ್ತರ ಕರ್ನಾಟಕ ಮೂಲದ ಇನ್ನಿಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರಿಬ್ಬರೂ ಸಾಮಾನ್ಯ ಕೆಲಸಗಳಲ್ಲಿ ತೊಡಗಿಕೊಂಡಿದ್ದವರು ಎನ್ನಲಾಗಿದೆ.
ನಟಿ ರಮ್ಯಾ ನೀಡಿದ ದೂರಿನಲ್ಲಿ ಸುಮಾರು 40ಕ್ಕೂ ಹೆಚ್ಚು ಅಕೌಂಟ್‌ಗಳ ವಿವರಗಳನ್ನು ಸೇರಿಸಿದ್ದಾರೆ. ಅದರಲ್ಲಿ 12 ಅಕೌಂಟ್‌ಗಳ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ 10ಕ್ಕೂ ಹೆಚ್ಚು ಖಾತೆಗಳ ಕುರಿತು ಮಾಹಿತಿ ಸಿಕ್ಕಿದ್ದು, ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಈ ನಡುವೆ, ಕೆಲವರು ಕೋರ್ಟ್ ಮೊರೆ ಹೋಗಿದ್ದರೆ, ಕೆಲವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಿಂದ ಹಾಕಿದ್ದ ಕಾಮೆಂಟ್‌ಗಳನ್ನು ಡಿಲೀಟ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಟವರ್ ಲೊಕೇಶನ್‌ಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುತ್ತಿದ್ದಾರೆ.