ಹೊಸದಿಗಂತ ಡಿಜಿಟಲ್ ಡೆಸ್ಕ್:
ಅದಾನಿ ಸಮೂಹದ ಮೇಲೆ ಮಾರುಕಟ್ಟೆ ನಿಯಂತ್ರಕ ಸಂಸ್ಥೆ ‘ಸೆಬಿ’ (SEBI) ಮತ್ತೊಮ್ಮೆ ತನ್ನ ತನಿಖಾ ಕಣ್ಣನ್ನು ನೆಟ್ಟಿದೆ. ಮೂರು ವರ್ಷಗಳ ಹಿಂದೆ ನಡೆದ ಎನ್‌ಡಿಟಿವಿ ಷೇರು ಖರೀದಿ ಪ್ರಕ್ರಿಯೆಯಲ್ಲಿ ‘ರಹಸ್ಯ ಮಾಹಿತಿ ಸೋರಿಕೆ’ಯಾಗಿದೆ ಎಂಬ ಗಂಭೀರ ಆರೋಪದ ಮೇಲೆ ಗೌತಮ್ ಅದಾನಿ ಅವರ ಪುತ್ರ ಪ್ರಣವ್ ಅದಾನಿ ಸೇರಿದಂತೆ ಹಲವರಿಗೆ ಸೆಬಿ ನೋಟಿಸ್ ಜಾರಿ ಮಾಡಿದೆ.
ಏನಿದು ಪ್ರಕರಣ?
2022ರಲ್ಲಿ ಅದಾನಿ ಎಂಟರ್‌ಪ್ರೈಸಸ್ ಸಂಸ್ಥೆಯು ಎನ್‌ಡಿಟಿವಿಯ ಶೇ. 26ರಷ್ಟು ಷೇರುಗಳನ್ನು ಖರೀದಿಸಲು ‘ಓಪನ್ ಆಫರ್’ ನೀಡಿತ್ತು. ಈ ವೇಳೆ ಪ್ರತಿ ಷೇರಿಗೆ 294 ರೂ. ಬೆಲೆ ನಿಗದಿಪಡಿಸಲಾಗಿತ್ತು. ನಿಯಮದ ಪ್ರಕಾರ, ಇಂತಹ ಪ್ರಮುಖ ಮಾಹಿತಿಯನ್ನು ಅಧಿಕೃತವಾಗಿ ಘೋಷಿಸುವವರೆಗೂ ಅತ್ಯಂತ ರಹಸ್ಯವಾಗಿಡಬೇಕು. ಆದರೆ, ಈ ಮಾಹಿತಿ ಬಹಿರಂಗವಾಗುವ ಮೊದಲೇ ಪ್ರಣವ್ ಅದಾನಿ ಅವರು ತಮ್ಮ ಸಂಬಂಧಿಕರೊಂದಿಗೆ ಇದನ್ನು ಹಂಚಿಕೊಂಡಿದ್ದರು ಎಂಬುದು ಸೆಬಿಯ ಸಂಶಯವಾಗಿದೆ.
ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಪ್ರಣವ್ ಅದಾನಿ ಅವರು ತಮ್ಮ ಮಾವ ಧನಪಾಲ್ ಶಾ ಹಾಗೂ ಬಾವಂದಿರಾದ ಕುನಾಲ್ ಮತ್ತು ನೃಪಾಲ್ ಶಾ ಅವರಿಗೆ ಓಪನ್ ಆಫರ್‌ನ ರಹಸ್ಯ ಮಾಹಿತಿಗಳನ್ನು ಮುಂಚಿತವಾಗಿ ನೀಡಿದ್ದರು ಎನ್ನಲಾಗಿದೆ. 2022ರ ಮೇ ತಿಂಗಳಿನಿಂದ ಸೆಪ್ಟೆಂಬರ್ ನಡುವೆ ನಡೆಸಿದ ತನಿಖೆಯಲ್ಲಿ, ಕುನಾಲ್ ಶಾ ಅವರು ಎನ್‌ಡಿಟಿವಿ ಷೇರುಗಳನ್ನು ದೊಡ್ಡ ಮಟ್ಟದಲ್ಲಿ ಖರೀದಿಸಿರುವುದು ಪತ್ತೆಯಾಗಿದೆ. ಇದೇ ಅವಧಿಯಲ್ಲಿ ಇವರು ಪ್ರಣವ್ ಅದಾನಿ ಅವರೊಂದಿಗೆ ನಿರಂತರವಾಗಿ ಫೋನ್ ಸಂಪರ್ಕದಲ್ಲಿದ್ದರು ಎಂಬ ಅಂಶವನ್ನೂ ಸೆಬಿ ಪತ್ತೆಹಚ್ಚಿದೆ.
ಈ ಹಿಂದೆ ಎಸ್‌ಬಿ ಎನರ್ಜಿ ಹೋಲ್ಡಿಂಗ್ಸ್ ಮತ್ತು ಅದಾನಿ ಗ್ರೀನ್ ಎನರ್ಜಿ ನಡುವಿನ ವ್ಯವಹಾರದಲ್ಲೂ ಪ್ರಣವ್ ಅದಾನಿ ವಿರುದ್ಧ ಇಂತಹದ್ದೇ ಆರೋಪ ಕೇಳಿಬಂದಿತ್ತು. ಆದರೆ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆ ಪ್ರಕರಣವನ್ನು ಇತ್ತೀಚೆಗಷ್ಟೇ ಕೈಬಿಡಲಾಗಿತ್ತು. ಆ ಬೆನ್ನಲ್ಲೇ ಈಗ ಎನ್‌ಡಿಟಿವಿ ಪ್ರಕರಣದಲ್ಲಿ ಅಕ್ಟೋಬರ್ 15, 2025ರಂದು ನೋಟಿಸ್ ನೀಡಲಾಗಿದ್ದು, ಆರೋಪಗಳಿಗೆ ಉತ್ತರಿಸುವಂತೆ ಸೂಚಿಸಲಾಗಿದೆ.
ಒಟ್ಟಾರೆಯಾಗಿ, ಷೇರು ಮಾರುಕಟ್ಟೆಯ ನಿಯಮಗಳನ್ನು ಉಲ್ಲಂಘಿಸಿ ‘ಇನ್ಸೈಡರ್ ಟ್ರೇಡಿಂಗ್’ ನಡೆಸಲಾಗಿದೆಯೇ ಎಂಬುದು ಈ ತನಿಖೆಯ ಪ್ರಮುಖ ಉದ್ದೇಶವಾಗಿದೆ.

