Saturday, October 18, 2025

ಪ್ರಿಯಾಂಕ್ ಖರ್ಗೆಗೆ ಸೂಕ್ತ ಭದ್ರತೆ ವ್ಯವಸ್ಥೆ: ಗೃಹ ಸಚಿವ ಡಾ. ಜಿ. ಪರಮೇಶ್ವರ್

ಹೊಸ ದಿಗಂತ ವರದಿ,ತುಮಕೂರು:

ರಾಜ್ಯದಲ್ಲಿ ಆರ್ ಎಸ್ ಎಸ್ ಚಟುವಟಿಕೆ ನಿಷೇಧಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಸಚಿವ ಪ್ರಿಯಾಂಕ ಖರ್ಗೆಯವರಿಗೆ ಬೆದರಿಕೆಯೊಡ್ಡುವ ಪೋಸ್ಟ್ ಮಾಡಿದ್ದ ವ್ಯಕ್ತಿಯನ್ನು ಮಹಾರಾಷ್ಟ್ರದಲ್ಲಿ ಬಂಧಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತುಮಕೂರಿನಲ್ಲಿ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪ್ರಿಯಾಂಕ್ ಖರ್ಗೆಯವರಿಗೆ ಎಲ್ಲ ರೀತಿಯ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಇದರ ಹಿಂದೆ ಯಾರಾದರೂ ಇದ್ದಾರ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದರು.

ಸರ್ಕಾರಿ ಜಾಗಗಳಲ್ಲಿ ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಖಾಸಗಿಯವರು ಕಾರ್ಯಕ್ರಮ ಮಾಡಬೇಕಾದರೆ ಅನುಮತಿ ಕಡ್ಡಾಯ. ಈ ಹಿಂದೆ ಜಗದೀಶ್‍ಶೆಟ್ಟರ್‍ರವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಖಾಸಗಿಯವರು ಸರ್ಕಾರಿ ಜಾಗದಲ್ಲಿ ಕಾರ್ಯಕ್ರಮ ಮಾಡುವುದನ್ನು ನಿಷೇಧ ಮಾಡಿ ಅಥವಾ ಅನುಮತಿ ಪಡೆಯುವಂತೆ ಆದೇಶ ಮಾಡಿದ್ದರು. ಆದರೆ ಇತ್ತೀಚೆಗೆ ಕೆಲವು ಸಂಘಟನೆಗಳು ಇದನ್ನು ದುರುಪಯೋಗ ಮಾಡಿಕೊಳ್ಳುತ್ತಿವೆ ಎಂದು ಅವರು ಹೇಳಿದರು.

ಶಾಲಾ-ಕಾಲೇಜು ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಆರ್‍ಎಸ್‍ಎಸ್ ಸೇರಿ ಬೇರೆ ಬೇರೆ ಖಾಸಗಿ ಸಂಸ್ಥೆಗಳಿಗೆ ಕಾರ್ಯಕ್ರಮ ಮಾಡಲು ಅವಕಾಶ ಕೊಡಬಾರದು ಎಂದು ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಆರ್‍ಎಸ್‍ಎಸ್‍ನವರು ಪಥಸಂಚಲನ ನಡೆಸುವ ಸಂಬಂಧ ಪೊಲೀಸರು ಅನುಮತಿ ಪಡೆಯಬೇಕು. ಕಾನೂನು ಕ್ರಮಗಳನ್ನು ಪಾಲಿಸಿ ಪಥಸಂಚಲನ ನಡೆಸಬೇಕು ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಹಣ ಮಾಡುವುದಕ್ಕೋಸ್ಕರ ಭೂಪರಿವರ್ತನೆ ಮಾಡಲಾಗುತ್ತಿದೆ ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವ ಪರಮೇಶ್ವರ್ ಅವರು, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದವರು, ಈಗ ಕೇಂದ್ರ ಸಚಿವರಾಗಿದ್ದಾರೆ. ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಭೂ ಪರಿವರ್ತನೆ ವಿಚಾರದಲ್ಲಿ ಹಣ ಮಾಡಲಾಗುತ್ತಿದೆ ಎಂಬುದನ್ನು ಅವರು ನಿರ್ಧಿಷ್ಟವಾಗಿ ಹೇಳಬೇಕು. ನಿರ್ಧಿಷ್ಟವಾಗಿ ಹೇಳಿದರೆ ತನಿಖೆ ಮಾಡುತ್ತೇವೆ ಎಂದರು.

error: Content is protected !!