Tuesday, October 14, 2025

ವಿಮಾನದ ಲ್ಯಾಂಡಿಂಗ್‌ ಗೇರ್‌ ಬಳಿ ಕುಳಿತು 2 ಗಂಟೆ ಪ್ರಯಾಣಿಸಿ ಭಾರತಕ್ಕೆ ಬಂದ ಅಫ್ಘಾನ್‌ ಬಾಲಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಮಾನದ ಚಕ್ರ ಇರುವ ಲ್ಯಾಂಡಿಂಗ್ ಗೇರ್‌ನಲ್ಲಿ ಅಡಗಿ ಕುಳಿತು 13 ವರ್ಷದ ಬಾಲಕನೊಬ್ಬ ಅಫ್ಘಾನಿಸ್ತಾನದ ಕಾಬೂಲ್‌ನಿಂದ ದೆಹಲಿಗೆ ಆಗಮಿಸಿದ ಘಟನೆ ನಡೆದಿದೆ.

ಭಾನುವಾರ ಬೆಳಿಗ್ಗೆ 11:10 ಕ್ಕೆ ಕಾಬೂಲಿನಿಂದ ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲ್ಯಾಂಡಿಂಗ್‌ ಆದ ಕಾಮ್ ಏರ್‌ಲೈನ್ಸ್‌ನಲ್ಲಿ ಬಾಲಕ ಆಗಮಿಸಿದ್ದಾನೆ. ವಿಮಾನ ಲ್ಯಾಂಡ್‌ ಆದ ಬಳಿಕ ಟ್ಯಾಕ್ಸಿ ವೇ ಬಳಿ ಬಾಲಕ ನಡೆದುಕೊಂಡು ಹೋಗುತ್ತಿರುವುದನ್ನು ಗಮನಿಸಿದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಆತನನ್ನು ವಶಕ್ಕೆ ಪಡೆದು ಟರ್ಮಿನಲ್ -3 ರಲ್ಲಿ ವಿಚಾರಣೆ ನಡೆಸಿದೆ. ವಿಚಾರಣೆ ನಡೆಸಿದ ಬಳಿಕ ಕಾಬೂಲಿಗೆ ವಾಪಸ್‌ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.

ವಿಚಾರಣೆ ವೇಳೆ ನಾನು ಕಾಬೂಲ್ ವಿಮಾನ ನಿಲ್ದಾಣವನ್ನು ಪ್ರವೇಶಿಸಿದ್ದೆ. ನಂತರ ಕುತೂಹಲಕ್ಕಾಗಿ ವಿಮಾನದ ಹಿಂಭಾಗದ ಲ್ಯಾಂಡಿಂಗ್ ಗೇರ್ ವಿಭಾಗದೊಳಗೆ ಪ್ರವೇಶಿಸಿದ್ದೆ ಎಂದಿದ್ದಾನೆ. ವಿಮಾನದ ಲ್ಯಾಂಡಿಂಗ್‌ ಗೇರ್ ವಿಭಾಗವನ್ನು ತಪಾಸಣೆ ನಡೆಸಲಾಗಿದ್ದು, ವಿಮಾನ ಸುರಕ್ಷಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ ಹುಡುಗನನ್ನು ಹಲವಾರು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಯಿತು ಮತ್ತು ಅದೇ ದಿನ ಸಂಜೆ 4 ಗಂಟೆ ಸುಮಾರಿಗೆ ಮತ್ತೊಂದು ವಿಮಾನದ ಮೂಲಕ ಕಾಬೂಲ್‌ಗೆ ಕಳುಹಿಸಲಾಯಿತು  ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

94 ನಿಮಿಷಗಳ ಪ್ರಯಾಣದಿಂದಲ್ಲಿ ಆತ ಬದುಕುಳಿದ್ದೆ ಪವಾಡ ಎನ್ನಲಾಗುತ್ತಿದೆ. ವಿಮಾನ ಟೇಕಾಫ್‌ ಆದ ನಂತರ ವೀಲ್ ಬೇ ಬಾಗಿಲು ತೆರೆಯುತ್ತದೆ. ಆ ಚಕ್ರ ಒಳಗಡೆ ಹೋದಂತೆ ಆ ಬಾಗಿಲು ಮುಚ್ಚುತ್ತದೆ. ಈ ಜಾಗದಲ್ಲಿ ಆತ ಕುಳಿತು ಪ್ರಯಾಣ ನಡೆಸಿದ್ದಾನೆ.

30,000 ಅಡಿ ಎತ್ತರದಲ್ಲಿ, ತಾಪಮಾನವು -50°C ತಲುಪಬಹುದು ಇದರ ಜೊತೆ ಆಮ್ಲಜನಕದ ಕೊರತೆ, ಘನೀಕರಿಸುವ ತಾಪಮಾನ ಮತ್ತು ಚಕ್ರಗಳಿಂದ ಪುಡಿಪುಡಿಯಾಗುವ ಅಪಾಯಗಳಿರುತ್ತವೆ. ಆದರೆ ವಿಮಾನ ಕಡಿಮೆ ಎತ್ತರದಲ್ಲಿ ಹಾರಾಡಿದ್ದರಿಂದ ಆತ ಪಾರಾಗಿರಬಹುದು ಎನ್ನಲಾಗಿದೆ.

error: Content is protected !!