Monday, December 15, 2025

ಇತಿಹಾಸದಲ್ಲಿ ಕಂಡರಿಯದಷ್ಟು ಕೆಟ್ಟ ಗಾಳಿ: ಬೆಂಗಳೂರಿಗರಿಗೆ ಉಸಿರಾಟದ ಬಿಕ್ಕಟ್ಟು ಗ್ಯಾರಂಟಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಐಟಿ ರಾಜಧಾನಿ ಬೆಂಗಳೂರಿನಲ್ಲಿ ವಾಯು ಗುಣಮಟ್ಟ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಪರಿಸರ ತಜ್ಞರಿಂದ ತೀವ್ರ ಕಳವಳ ವ್ಯಕ್ತವಾಗಿದೆ. ಪ್ರಮುಖವಾಗಿ ವಾಯು ಮಾಲಿನ್ಯದಿಂದಾಗಿ ನಗರದ ಗಾಳಿ ವಿಷಮಯವಾಗುತ್ತಿದ್ದು, ಪರಿಸ್ಥಿತಿ ಹೀಗೆ ಮುಂದುವರಿದರೆ ಬೆಂಗಳೂರು ಕೂಡ ರಾಷ್ಟ್ರ ರಾಜಧಾನಿ ದೆಹಲಿಯ ಹಾದಿ ಹಿಡಿಯುವುದರಲ್ಲಿ ಅನುಮಾನವಿಲ್ಲ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ಕಾರಣದಿಂದಾಗಿ ಭವಿಷ್ಯದಲ್ಲಿ ನಗರದಲ್ಲಿ ಉಸಿರಾಟದ ಬಿಕ್ಕಟ್ಟು ಸೃಷ್ಟಿಯಾಗುವ ಸಾಧ್ಯತೆಯಿದೆ.

ಇತ್ತೀಚಿನ ವರದಿಗಳ ಪ್ರಕಾರ, ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ (AQI)ದಲ್ಲಿ ಗಣನೀಯ ವ್ಯತ್ಯಾಸ ಕಾಣುತ್ತಿದೆ. ನೆನ್ನೆಯ ದಿನ (ಡಿಸೆಂಬರ್ 11) AQI 180ಕ್ಕೆ ತಲುಪಿದ್ದರೆ, ಇಂದು ಅದು 175ರ ಮಟ್ಟದಲ್ಲಿದೆ. ಹಿಂದೆಂದೂ ಕಂಡಿರದ ರೀತಿಯಲ್ಲಿ ಈ ಬದಲಾವಣೆಗಳು ನಡೆಯುತ್ತಿವೆ ಎಂದು ಪರಿಸರ ತಜ್ಞರು ತಿಳಿಸಿದ್ದು, ಈ ಸ್ಥಿತಿಯನ್ನು ಕೂಡಲೇ ನಿಯಂತ್ರಿಸದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಸರ್ಕಾರವು ಈ ನಿಟ್ಟಿನಲ್ಲಿ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಕಾರಣಗಳೇನು?

ನಗರದ ವಾಯು ಮಾಲಿನ್ಯಕ್ಕೆ ಧೂಳಿನಿಂದ ಕೂಡಿರುವ ರಸ್ತೆಗಳು ಮತ್ತು ವಿಪರೀತ ವಾಹನ ದಟ್ಟಣೆಯು ಪ್ರಮುಖ ಕಾರಣಗಳಾಗಿವೆ. ಇಂತಹ ಕಲುಷಿತ ಗಾಳಿಯು ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿ, ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಸಾಮಾಜಿಕ ಜಾಲತಾಣಗಳಲ್ಲಿ ‘ಅನ್‌ಬಾಕ್ಸಿಂಗ್’ ಎಂಬ ಖಾತೆಯು ಬೆಂಗಳೂರಿನ ಮಾಲಿನ್ಯದ ಕುರಿತು ವಿಡಿಯೋವೊಂದನ್ನು ಹಂಚಿಕೊಂಡಿದ್ದು, “ನಾನು ಒಂದು ತಿಂಗಳಿನಿಂದ ಬೆಂಗಳೂರಿನ ಗಾಳಿಯನ್ನು ಅಧ್ಯಯನ ಮಾಡುತ್ತಿದ್ದೇನೆ. ಆದರೆ ನಾನು ಯೋಚಿಸಿದ್ದಕ್ಕಿಂತ ಹೆಚ್ಚು ಕಲುಷಿತವಾಗಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಗರದ ಸರಾಸರಿ PM2.5 ಮಟ್ಟಗಳು 40ರ ಆಸುಪಾಸಿನಲ್ಲಿವೆ ಎಂದು ತಿಳಿದುಬಂದಿದೆ.

ವಿಶ್ವ ಆರೋಗ್ಯ ಸಂಸ್ಥೆಯು PM2.5 ಮಟ್ಟ 5ಕ್ಕಿಂತ ಕಡಿಮೆ ಇರಬೇಕು ಎಂದು ಶಿಫಾರಸು ಮಾಡಿದರೆ, ಭಾರತೀಯ ಸುರಕ್ಷತಾ ಮಿತಿಯು ಅದನ್ನು 40ಕ್ಕಿಂತ ಕಡಿಮೆ ಸ್ವೀಕಾರಾರ್ಹ ಎಂದು ಹೇಳುತ್ತದೆ. ಬೆಂಗಳೂರಿನಲ್ಲಿ ಈ PM2.5 ಮಟ್ಟವು ಈಗಾಗಲೇ 40ರ ಸಮೀಪವಿದ್ದು, ಗಾಳಿಯ ಗುಣಮಟ್ಟವು ‘ಮಧ್ಯಮ’ ಮಾಲಿನ್ಯದ ಹಂತಕ್ಕೆ (151-200) ಹತ್ತಿರದಲ್ಲಿದೆ. ಈಗಾಗಲೇ ನಗರದ AQI 200ನ್ನು ದಾಟಿದ ಉದಾಹರಣೆಗಳು ಇದ್ದು, ಇದರಿಂದ ಜನಸಾಮಾನ್ಯರು ಹೊರಗೆ ಓಡಾಡಲು ಕಷ್ಟವಾಗುತ್ತದೆ ಮತ್ತು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

error: Content is protected !!