ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಆಕಾಶವಾಣಿಯ ಮುಖ್ಯವಾಹಿನಿಗೆ ಇಂದು 70ರ ಸಂಭ್ರಮ.
1955ರ ನವೆಂಬರ್ 2 ರಂದು ಆರಂಭವಾದ ಆಕಾಶವಾಣಿಯ ಮುಖ್ಯ ವಾಹಿನಿ ಇಲ್ಲಿಯವರೆಗೆ ಅನೇಕ ವಿಶಿಷ್ಠ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಜೊತೆಗೆ ಜನರ ವಿಶ್ವಾಸ ಹಾಗೂ ನಂಬಿಕೆಯನ್ನು ಉಳಿಸಿಕೊಂಡಿದೆ.
70 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಡೆದ ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತ ಖ್ಯಾತ ಮನೋವೈದ್ಯರಾದ ಡಾ. ಸಿ.ಆರ್.ಚಂದ್ರಶೇಖರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಅವರು, ಇತರ ಮಾಧ್ಯಮಗಳು ಪ್ರಸಾರ ಮಾಡುವಂತಹ ಮಾಹಿತಿ ಹಾಗೂ ಕಾರ್ಯಕ್ರಮಗಳಿಗಿಂತ ಭಿನ್ನವಾಗಿ ಆಕಾಶವಾಣಿ ಶಿಕ್ಷಣ, ಜ್ಞಾನ ಹಾಗೂ ಜನರಿಗೆ ಮನೋರಂಜನೆ ನೀಡುತ್ತಿದೆ ಎಂದು ತಿಳಿಸಿದರು.
ಉಪಮಹಾನಿರ್ದೇಶಕರಾದ ಕೆ.ಪಿ. ಸಂಜೀವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಉಪನಿರ್ದೇಶಕರಾದ ಡಾ. ಎನ್.ರಘು, ಮತ್ತು ನೂತನ್ ಎಸ್ ಕದಮ್, ಆಡಳಿತಾಧಿಕಾರಿ ಆರ್. ಶಿವಕುಮಾರ್ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಇದೇ ವೇಳೆ ಆಕಾಶವಾಣಿ ಸಿಬ್ಬಂದಿಗೆ ಸ್ಮರಣಿಕೆ ನೀಡಲಾಯಿತು.

