ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರ ಮನೆಯ ಮೇಲೆ ಕಂದಾಯ ಗುಪ್ತಚರ ಮತ್ತು ಕಸ್ಟಮ್ಸ್ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಈ ಇಬ್ಬರೂ ನಟರ ವಿರುದ್ಧ ಸ್ಮಗ್ಲಿಂಗ್ ಆರೋಪ ಕೇಳಿ ಬಂದಿದ್ದು, ಮನೆಯಲ್ಲಿರುವ ಕಾರುಗಳು, ಇತರೆ ವಿದೇಶಿ ವಸ್ತುಗಳ ತನಿಖೆ ನಡೆಸಿದ್ದಾರೆ.
ಕೇರಳದ ಕೊಚ್ಚಿಯ ತೇವರದಲ್ಲಿರುವ ಪೃಥ್ವಿರಾಜ್ ಸುಕುಮಾರನ್ ಮನೆ ಹಾಗೂ ಕೊಚ್ಚಿಯ ಪನಂಪಿನ್ನಿ ನಗರದಲ್ಲಿರುವ ದುಲ್ಕರ್ ಸಲ್ಮಾನ್ ಮನೆ ಸೇರಿದಂತೆ ಇವರಿಗೆ ಸೇರಿದ ಒಟ್ಟು 30 ಕಡೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ನಟರುಗಳು ಮಾತ್ರವೇ ಅಲ್ಲದೆ ಕೇರಳದ ಪ್ರಮುಖ ಉದ್ಯಮಿಗಳ ಮನೆ ಮೇಲೆಯೂ ದಾಳಿ ನಡೆಸಲಾಗಿದೆ. ಈ ದಾಳಿಗೆ ‘ನುಮ್ಕೂರ್’ ಎಂದು ಹೆಸರಿಡಲಾಗಿದೆ.
ಅಕ್ರಮವಾಗಿ ವಿದೇಶಗಳಿಂದ ವಾಹನ ಆಮದು ಮಾಡಿಕೊಳ್ಳುವುದು, ತೆರಿಗೆ ವಂಚನೆಗಳನ್ನು ಪತ್ತೆ ಹಚ್ಚಲು ದಾಳಿ ನಡೆಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ವಾಹನಗಳನ್ನು ವಶಪಡಿಸಿಕೊಂಡವರಿಗೆ ನೋಟಿಸ್ ನೀಡಲಾಗುವುದು ಮತ್ತು ವಾಹನಗಳ ಸಂಬಂಧಿತ ದಾಖಲೆಗಳನ್ನು ಹಾಜರುಪಡಿಸಲು ಕೇಳಲಾಗುತ್ತದೆ. ತೆರಿಗೆ ವಂಚಿಸಿ ಎಂಟು ವಿಧದ ಉನ್ನತ ದರ್ಜೆಯ ವಾಹನಗಳನ್ನು ಭೂತಾನ್ ಮೂಲಕ ಭಾರತಕ್ಕೆ ಆಮದು ಮಾಡಿಕೊಳ್ಳಲಾಗಿದೆ ಎಂದು ತನಿಖೆಗಳು ಬಹಿರಂಗಪಡಿಸಿವೆ.