Tuesday, September 30, 2025

ಕಾವೇರಿ ಆರತಿಗೆ 5 ಲಕ್ಷ ರೂ. ಸಮರ್ಪಿಸಿದ ಅಮೆರಿಕ ದಂಪತಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಐತಿಹಾಸಿಕ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ ಸಿಕ್ಕಿದ್ದು, ಉತ್ತಮ ಪ್ರಶಂಸೆ ಸಿಗುತ್ತಿದೆ. ಇದರ ನಡುವೆ ಅಮೆರಿಕದಲ್ಲಿರುವ ಬೆಂಗಳೂರು ದಂಪತಿಗಳು ಕಾವೇರಿ ಆರತಿಗಾಗಿ 5 ಲಕ್ಷ ರೂ. ಸಮರ್ಪಿಸಿದ್ದಾರೆ.

ಕಾವೇರಿ ನದಿಗೆ ಕಾವೇರಿ ಆರತಿಯಂತಹ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಅಮೆರಿಕದ ಫೀನಿಕ್ಸ್ನಲ್ಲಿ ನೆಲೆಸಿರುವ ಬೆಂಗಳೂರು ಮೂಲದ ಜ್ಯೋತಿ ಮತ್ತು ವಿಕಾಸ್ ದಂಪತಿ 5 ಲಕ್ಷ ರೂ.ಗಳನ್ನು ಸಮರ್ಪಣೆ ಮಾಡಿದ್ದಾರೆ.

ತಾವು ಬೆಂಗಳೂರಿನವರಾಗಿದ್ದು, ಕಾವೇರಿ ನೀರನ್ನು ಕುಡಿದು ಬಾಲ್ಯ ಜೀವನ ಕಳೆದು, ಇಂಜಿನಿಯರಿಂಗ್ ಪದವಿ ಪೂರೈಸಿ ಅಮೆರಿಕದಲ್ಲಿ ನೆಲೆಸಿದ್ದೇವೆ. ಸೆ.26ರಿಂದ ಕೆಆರ್‌ಎಸ್‌ನ ಬೃಂದಾವನದಲ್ಲಿ ಆರಂಭವಾಗಿರುವ ಐತಿಹಾಸಿಕ “ಕಾವೇರಿ ಆರತಿ” ಕಾರ್ಯಕ್ರಮವನ್ನು ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ವೀಕ್ಷಿಸಿ ಭಾವುಕರಾಗಿದ್ದೇವೆ. ಅಮೆರಿಕದಲ್ಲಿ ನೆಲೆಸಿದ್ದರೂ ನಾವು ಕುಡಿದು ಬೆಳೆದಿರುವುದು ಕಾವೇರಿ ನೀರೇ. ಕಾವೇರಿ ತಾಯಿ ಕೋಟ್ಯಂತರ ಜನರ ದಾಹ ನೀಗಿಸಿದ್ದು, ರೈತರ ಬದುಕಿಗೆ ಆಸರೆಯಾಗಿದ್ದಾಳೆ. ಜೀವನದ ಅವಿಭಾಜ್ಯ ಅಂಗವಾಗಿದ್ದಾಳೆ. ಕನ್ನಡ ನಾಡಿನ ಜನತೆ ಕಾವೇರಿಯನ್ನು ಮರೆಯಲು ಸಾಧ್ಯವಿಲ್ಲ. ಇಂತಹ ಜೀವನದಿಗೆ ವಂದಿಸಿ, ನಮಿಸುವ ಕಾರ್ಯಕ್ಕೆ ಮುನ್ನುಡಿ ಬರೆದಿರುವ ಕರ್ನಾಟಕ ಸರ್ಕಾರದ ಈ ಕಾರ್ಯಕ್ಕೆ ಎಲ್ಲಾ ಅನಿವಾಸಿ ಕನ್ನಡಿಗರ ಪರವಾಗಿ ಅಭಿನಂದನೆಗಳು ಎಂದು ಜ್ಯೋತಿ ವಿಕಾಸ್ ಹೇಳಿದ್ದಾರೆ.

ಕರ್ನಾಟಕ ಸರ್ಕಾರದ ಈ ಕಾರ್ಯ ಪ್ರಶಂಸನೀಯ. ರಾಜ್ಯದ ಇತಿಹಾಸದಲ್ಲಿ ಈ ಕಾರ್ಯ ನಿರಂತರವಾಗಿ ನಡೆಯಬೇಕು. ಕಾವೇರಿ ಮಾತೆಗೆ ವಂದಿಸಿ, ಪೂಜಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಮತ್ತು ಜವಾಬ್ದಾರಿ. ದೇವರು ಎಂದರೆ ಪ್ರಕೃತಿ. ಆ ಪ್ರಕೃತಿ ರೂಪವೇ ಕಾವೇರಿ. ಕಾವೇರಿಯನ್ನು ಪೂಜಿಸುವುದರಿಂದ ಮಾನವ ಕುಲ ಮಾತ್ರವಲ್ಲದೆ ಸಕಲ ಜೀವಸಂಕುಲಕ್ಕೂ ಸನ್ಮಂಗಳ ಉಂಟಾಗಲಿದೆ. ಆದ್ದರಿಂದ ಕಾವೇರಿ ಆರತಿಯನ್ನು ಕೇವಲ ದಸರಾಗೆ ಮಾತ್ರ ಸೀಮಿತಗೊಳಿಸದೆ ವರ್ಷ ಪೂರ್ತಿ ಆಚರಣೆ ಮಾಡಬೇಕು ಎಂದು ಹೇಳಿದ್ದಾರೆ.