Tuesday, September 30, 2025

ಟಿಕೆಟ್ ದರ ಹೆಚ್ಚಳಕ್ಕೆ ವಿರೋಧ ಇದ್ರು ‘ಕಾಂತಾರ’ಗೆ ಫುಲ್ ಸಪೋರ್ಟ್ ಎಂದ ಆಂಧ್ರ DCM

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಿಷಬ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ: ಚಾಪ್ಟರ್ 1’ ಚಿತ್ರದ ಬಿಡುಗಡೆಗೆ ಇನ್ನೊಂದು ದಿನ ಬಾಕಿ ಇದೆ. ಸಿನಿಮಾ ಬಿಡುಗಡೆಯ ಮುನ್ನ ಪ್ರಚಾರ ಜೋರಾಗಿದೆ. ಇತ್ತೀಚೆಗಷ್ಟೆ ಕರ್ನಾಟಕ ಸರ್ಕಾರದ ಏಕರೂಪ ಟಿಕೆಟ್ ದರ ಆದೇಶ ಜಾರಿಗೆ ಬಂದಿತ್ತು, ಆದರೆ ಚಿತ್ರ ನಿರ್ಮಾಪಕರು ಹೊಂಬಾಳೆ ಫಿಲ್ಮ್ಸ್ ನ್ಯಾಯಾಲಯಕ್ಕೆ ಹೋಗಿ ಆದೇಶಕ್ಕೆ ತಡೆ ತಂದಿದ್ದರು. ಈಗ, ರಾಜ್ಯದಲ್ಲಿ ಹೆಚ್ಚುವರಿ ಮೊತ್ತಕ್ಕೆ ಟಿಕೆಟ್ ಮಾರಾಟ ಮಾಡಲು ಅವಕಾಶ ಸಿಕ್ಕಿದೆ.

ಈ ನಡುವೆ, ನೆರೆ ರಾಜ್ಯ ಆಂಧ್ರ ಪ್ರದೇಶದಲ್ಲೂ ‘ಕಾಂತಾರ: ಚಾಪ್ಟರ್ 1’ ಚಿತ್ರದ ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ದೊರೆತಿದೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಪರಭಾಷೆಯ ಸಿನಿಮಾಗಳ ಟಿಕೆಟ್ ದರ ಹೆಚ್ಚಿಸಲು ಸರ್ಕಾರದ ಅನುಮತಿ ಅಗತ್ಯವಿದೆ. ‘ಕಾಂತಾರ’ ನಿರ್ಮಾಪಕರು ತಮ್ಮ ಮನವಿಯನ್ನು ಸಲ್ಲಿಸಿ ಟಿಕೆಟ್ ದರ ಹೆಚ್ಚಿಸಲು ಅನುಮತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಆಂಧ್ರದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಪವನ್ ಕಲ್ಯಾಣ್ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ, “ಸಿನಿಮಾಗಳು ಸಮಾಜದಲ್ಲಿ ಜೋಡಿಸುವ ಕೆಲಸ ಮಾಡಬೇಕು, ಮುರಿಯುವ ಕಾರ್ಯ ಮಾಡಬಾರದು. ಕರ್ನಾಟಕದ ಕಲಾವಿದರು ಮತ್ತು ಸಿನಿಮಾಗಳನ್ನು ನಾವು ದಶಕಗಳಿಂದ ಸ್ವಾಗತಿಸುತ್ತಿದ್ದೇವೆ. ಈ ಪರಭಾಷೆಯ ಸಿನಿಮಾಗಳ ಸಮಸ್ಯೆಗಳನ್ನು ಚಿತ್ರರಂಗದವರು ಒಟ್ಟಾಗಿ ಬಗೆಹರಿಸಬೇಕು” ಎಂದಿದ್ದಾರೆ.

ಪರಭಾಷೆ ಸಿನಿಮಾಗಳ ಟಿಕೆಟ್ ದರ ಹೆಚ್ಚಳವನ್ನು ವಿರೋಧಿಸ ಕೇಳಿ ಬಂದರೂ, ‘ಕಾಂತಾರ’ ಚಿತ್ರಕ್ಕೆ ವಿಶೇಷ ಅವಕಾಶ ನೀಡಲಾಗಿದೆ. ಪವನ್ ಕಲ್ಯಾಣ್ ಈ ನಿರ್ಧಾರದಿಂದ ಎರಡು ರಾಜ್ಯಗಳಲ್ಲಿಯೂ ಕನ್ನಡ ಚಿತ್ರರಂಗದ ಪ್ರಗತಿಗೆ ಸಹಕಾರ ಸಿಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.