ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಳಿಗಾಲ ಆರಂಭವಾಗುವ ಮುನ್ನ ವಾಯು ಮಾಲಿನ್ಯವನ್ನು ತಡೆಗಟ್ಟಲು ತೆಗೆದುಕೊಂಡ ಕ್ರಮಗಳನ್ನು ಮೂರು ವಾರಗಳಲ್ಲಿ ಪ್ರಕಟಿಸುವಂತೆ ಸಿಎಕ್ಯೂಎಂ, ಸಿಪಿಸಿಬಿ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಸುಪ್ರೀಂ ಕೋರ್ಟ್ ಬುಧವಾರ ನಿರ್ದೇಶನ ನೀಡಿದೆ.
ಮುಖ್ಯ ನ್ಯಾಯಮೂರ್ತಿ(ಸಿಜೆಐ) ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠ, ಮಾಲಿನ್ಯ ನಿಯಂತ್ರಣ ಮಂಡಳಿಗಳಲ್ಲಿನ ಖಾಲಿ ಹುದ್ದೆಗಳನ್ನು ಮೂರು ತಿಂಗಳಲ್ಲಿ ಭರ್ತಿ ಮಾಡುವಂತೆ ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನ ಹಾಗೂ ಪಂಜಾಬ್‌ನಂತಹ ರಾಜ್ಯಗಳಿಗೆ ಸೂಚಿಸಿದೆ.
ವಾಯು ಗುಣಮಟ್ಟ ನಿರ್ವಹಣಾ ಆಯೋಗ(ಸಿಎಕ್ಯೂಎಂ) ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ)ಗೂ ಸುಪ್ರೀಂ ಕೋರ್ಟ್ ಇದೇ ರೀತಿಯ ನಿರ್ದೇಶನಗಳನ್ನು ನೀಡಿದೆ. ಆದಾಗ್ಯೂ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು, ಸಿಎಕ್ಯೂಎಂ ಮತ್ತು ಸಿಪಿಸಿಬಿಗಳಲ್ಲಿ ಬಡ್ತಿ ಹುದ್ದೆಗಳನ್ನು ಭರ್ತಿ ಮಾಡಲು ಆರು ತಿಂಗಳು ಕಾಲಾವಕಾಶ ನೀಡಿದೆ.
ಈ ಪ್ರಾಧಿಕಾರಗಳಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸಂಬಂಧಿಸಿದ ಸ್ವಯಂಪ್ರೇರಿತ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಅಕ್ಟೋಬರ್ 8 ರಂದು ಮುಂದಿನ ವಿಚಾರಣೆ ನಡೆಸಲಿದೆ.
ಮಾಲಿನ್ಯ ನಿಯಂತ್ರಣ ಮಂಡಳಿಗಳಲ್ಲಿ ದೀರ್ಘಕಾಲದಿಂದ ಬಾಕಿ ಇರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ವಿಫಲವಾದ ರಾಜ್ಯಗಳ ವಿರುದ್ಧ ನ್ಯಾಯಾಲಯವು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.