Friday, November 28, 2025

ಮತ್ತೊಂದು ಸಮಸ್ಯೆ, ಇನ್ನೊಂದು ಟ್ವೀಟ್: ಮತ್ತೆ ಚರ್ಚೆಯಲ್ಲಿ ಕಿರಣ್ ಮಜುಂದಾರ್ ಶಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚೆಗೆ ನಗರದ ರಸ್ತೆಗುಂಡಿಗಳ ಬಗ್ಗೆ ಟ್ವೀಟ್ ಮಾಡಿ ಸುದ್ದಿಯಾಗಿದ್ದ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಮತ್ತೆ ಬೆಂಗಳೂರಿನ ಮತ್ತೊಂದು ಸಮಸ್ಯೆಯನ್ನು ಉಲ್ಲೇಖಿಸಿದ್ದಾರೆ. ಈ ಬಾರಿ ಅವರು ಗಮನ ಹರಿಸಿದ್ದು ನಮ್ಮ ಮೆಟ್ರೋ ನಿಲ್ದಾಣಗಳ ಹೊರಗಿನ ಗಲೀಜು ಪರಿಸ್ಥಿತಿ ಬಗ್ಗೆ.

ಮಲ್ಲೇಶ್ವರಂ ಮೆಟ್ರೋ ನಿಲ್ದಾಣದ ಒಂದು ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಮರುಹಂಚಿಕೊಂಡಿರುವ ಕಿರಣ್ ಮಜುಂದಾರ್ ಶಾ, “ನಮ್ಮ ಮೆಟ್ರೋ ನಿಲ್ದಾಣಗಳ ಹೊರಗೆ ಗುಟ್ಕಾ ಉಗುಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಇಂಥವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಹಾಗೂ ಭಾರೀ ದಂಡ ವಿಧಿಸಬೇಕು” ಎಂದು ಕಿಡಿಕಾರಿದ್ದಾರೆ. ಅವರು ಈ ಅಸಭ್ಯ ವರ್ತನೆಗೆ ಮೆಟ್ರೋ ಹೊರಗೆ ಪ್ರಯಾಣಿಕರಿಗಾಗಿ ಕಾಯುತ್ತಿರುವ ಆಟೋ ಚಾಲಕರನ್ನೇ ಕಾರಣ ಎಂದು ಆರೋಪಿಸಿದ್ದಾರೆ.

ಈ ವಿಷಯವು ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಅನೇಕ ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕೆಲವರು, “ಇದು ಒಂದೇ ಮೆಟ್ರೋ ನಿಲ್ದಾಣದ ಸಮಸ್ಯೆಯಲ್ಲ, ಬದಲಾಗಿ ಇದು ಅಸಭ್ಯ ಮತ್ತು ನಿರ್ಲಕ್ಷ್ಯದ ಪರಿಣಾಮ,” ಎಂದು ಹೇಳಿದ್ದಾರೆ. ಆಟೋ ಚಾಲಕರ ಸಂಘಗಳು ಇದ್ದರೂ, ಸ್ವಚ್ಛತೆಯ ಕುರಿತಾದ ಜಾಗೃತಿ ಮೂಡಿಸಲು ಯಾವುದೇ ಪ್ರಯತ್ನ ನಡೆದಿಲ್ಲ ಎಂಬ ಟೀಕೆಗಳು ವ್ಯಕ್ತವಾಗಿವೆ.

ಮತ್ತೊಬ್ಬ ನೆಟ್ಟಿಗರು, “ಬಿಎಂಆರ್‌ಸಿಎಲ್ ತನ್ನ ವ್ಯಾಪ್ತಿಯಲ್ಲಿರುವ ಪ್ರದೇಶಗಳಲ್ಲಿ ‘ಹಾರ್ನ್ ಮಾಡಬೇಡಿ’ ಎಂಬ ಬೋರ್ಡ್ ಹಾಕಿದೆ, ಆದರೆ ಸ್ವಚ್ಛತೆಯನ್ನು ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ,” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನೂ ಕೆಲವರು ಮಲ್ಲೇಶ್ವರಂ ಹಾಗೂ ಯಶವಂತಪುರ ಮೆಟ್ರೋ ನಿಲ್ದಾಣಗಳ ಸುತ್ತಮುತ್ತಲಿನ ಸ್ಥಿತಿಯನ್ನು ಉಲ್ಲೇಖಿಸಿ, “ಯಶವಂತಪುರ ನಿಲ್ದಾಣದ ಕೆಳಗೆ ಹರಿಯುವ ನೀರು, ಮಲ್ಲೇಶ್ವರಂ ಸುತ್ತಲಿನ ಕೊಳಕು ಹಾಗೂ ಸೋಪ್ ಕಾರ್ಖಾನೆಯ ಬಳಿ ತುಂಬಿ ಹರಿಯುವ ಬಿನ್‌ಗಳು – ಇವೆಲ್ಲವೂ ನಮ್ಮ ಮೆಟ್ರೋಗಳ ಸುತ್ತಲಿನ ನೈರ್ಮಲ್ಯ ಹೇಗಿದೆ ಎಂಬುದನ್ನು ತೋರಿಸುತ್ತವೆ,” ಎಂದು ಅಭಿಪ್ರಾಯಪಟ್ಟಿದ್ದಾರೆ.

“ಒಳಗೆ ಮೆಟ್ರೋ ಎಷ್ಟು ಸ್ವಚ್ಛವಾಗಿದೆಯೋ, ಅದರ ಹೊರಗೆ ಅಷ್ಟೇ ಕೊಳಕು ಇದೆ” ಎಂದು ಮತ್ತೊಬ್ಬ ನೆಟ್ಟಿಗ ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದಾರೆ.

ಈ ಘಟನೆಯಿಂದ ಮತ್ತೆ ಒಂದು ಬಾರಿ, ಬೆಂಗಳೂರು ನಗರದಲ್ಲಿ ನೈರ್ಮಲ್ಯ ಮತ್ತು ಸಾರ್ವಜನಿಕ ಶಿಸ್ತಿನ ಕೊರತೆ ಎಂಬ ಪ್ರಶ್ನೆ ಮತ್ತೊಮ್ಮೆ ಎದ್ದಿದೆ.

https://twitter.com/kiranshaw/status/1986739384356663375?ref_src=twsrc%5Etfw%7Ctwcamp%5Etweetembed%7Ctwterm%5E1986739384356663375%7Ctwgr%5E8841d56f0305d7da7f2984d8f65b5ccbbe861b83%7Ctwcon%5Es1_c10&ref_url=https%3A%2F%2Fwww.livemint.com%2Fnews%2Ftrends%2Fkiran-mazumdar-shaw-fumes-over-gutka-stains-outside-bengaluru-metro-calls-for-hefty-fines-11762563060732.html
error: Content is protected !!