ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೋಶಿಯಲ್ ಮೀಡಿಯಾ ಯುಗದಲ್ಲಿ ಜನಪ್ರಿಯತೆಯನ್ನು ಅಳೆಯುವ ಪ್ರಮುಖ ಮಾಪಕವೇ ಫಾಲೋವರ್ಸ್ ಸಂಖ್ಯೆ. ಆದರೆ ಈ ಅಂಕಿ-ಅಂಶಗಳು ಯಾವಾಗಲೂ ಸ್ಥಿರವಾಗಿರುತ್ತವೆ ಎಂಬುದಿಲ್ಲ. ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಇತ್ತೀಚೆಗೆ ಇದೇ ಅನುಭವಕ್ಕೆ ಸಾಕ್ಷಿಯಾಗಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಕಳೆದ ಕೆಲ ದಿನಗಳಲ್ಲಿ ಅವರ ಫಾಲೋವರ್ಸ್ ಸಂಖ್ಯೆ ಅಚ್ಚರಿಯಂತೆ ಗಣನೀಯವಾಗಿ ಕುಸಿತ ಕಂಡಿದೆ. ಇದರಿಂದಾಗಿ ಅವರು ನೇರವಾಗಿ ಎಕ್ಸ್ ಮಾಲೀಕ ಎಲಾನ್ ಮಸ್ಕ್ ಅವರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.
ಡಿಸೆಂಬರ್ 3ರಂದು ಅನುಪಮ್ ಖೇರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ಕಳೆದ 15 ದಿನಗಳಲ್ಲಿ ಸುಮಾರು 9 ಲಕ್ಷಕ್ಕಿಂತ ಹೆಚ್ಚು ಫಾಲೋವರ್ಸ್ ಕಳೆದುಕೊಂಡಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದ್ದರು. ಇದು ದೂರು ಅಲ್ಲ, ಕೇವಲ ಕುತೂಹಲ ಎಂದು ಅವರು ಸ್ಪಷ್ಟಪಡಿಸಿದ್ದರು. ಈ ಪ್ರಶ್ನೆಗೆ ಎಲಾನ್ ಮಸ್ಕ್ ವೈಯಕ್ತಿಕವಾಗಿ ಪ್ರತಿಕ್ರಿಯಿಸದಿದ್ದರೂ, ಎಕ್ಸ್ ಸಂಸ್ಥೆಯ ಎಐ ಚಾಟ್‌ಬಾಟ್ ‘ಗ್ರೋಕ್’ ಉತ್ತರ ನೀಡಿದೆ.
ಗ್ರೋಕ್ ಪ್ರಕಾರ, ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ನಕಲಿ, ಬಾಟ್ ಮತ್ತು ದೀರ್ಘಕಾಲ ನಿಷ್ಕ್ರಿಯ ಖಾತೆಗಳನ್ನು ತೆರವುಗೊಳಿಸುವ ಕ್ಲೀನ್-ಅಪ್ ಪ್ರಕ್ರಿಯೆ ನಡೆಯುತ್ತಿದೆ. ಇದರ ಪರಿಣಾಮವಾಗಿ ಅನೇಕ ಪ್ರಸಿದ್ಧರ ಫಾಲೋವರ್ಸ್ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ಈ ಸಮಸ್ಯೆ ಅನುಪಮ್ ಖೇರ್‌ಗೆ ಮಾತ್ರ ಸೀಮಿತವಾಗಿಲ್ಲ. ಜಾಗತಿಕ ಸೆಲೆಬ್ರಿಟಿಗಳಾದ ಜಸ್ಟಿನ್ ಬೀಬರ್, ಟೇಲರ್ ಸ್ವಿಫ್ಟ್, ಕ್ರಿಸ್ಟಿಯಾನೊ ರೊನಾಲ್ಡೊ ಸೇರಿದಂತೆ ಹಲವರು ಲಕ್ಷಾಂತರ ಫಾಲೋವರ್ಸ್ ಕಳೆದುಕೊಂಡಿದ್ದಾರೆ.

