Friday, January 9, 2026

ಕಣ್ಣಿನ ನೋವಿಗಿಂತ ಉಪನ್ಯಾಸಕರ ಮಾತು ಹೆಚ್ಚು ಚುಚ್ಚಿತೇ? ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಲೇಜಿಗೆ ರಜೆ ಹಾಕಿದ ಕಾರಣಕ್ಕಾಗಿ ಉಪನ್ಯಾಸಕರು ವಿದ್ಯಾರ್ಥಿಗಳ ಮುಂದೆ ಮಾಡಿದ ಅವಮಾನ ಹಾಗೂ ನೀಡಿದ ಕಿರುಕುಳಕ್ಕೆ ಮನನೊಂದ ಡೆಂಟಲ್ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ನಡೆದಿದೆ.

ಬೊಮ್ಮನಹಳ್ಳಿಯ ಖಾಸಗಿ ಕಾಲೇಜಿನಲ್ಲಿ ಓರಲ್ ಮೆಡಿಸಿನ್ ಮತ್ತು ರೇಡಿಯಾಲಜಿ ವಿಭಾಗದ 3ನೇ ವರ್ಷದ ವಿದ್ಯಾರ್ಥಿನಿಯಾಗಿದ್ದ ಯಶಸ್ವಿನಿ (23) ಸಾವನ್ನಪ್ಪಿದ ದುರ್ದೈವಿ. ಬುಧವಾರ (ಜ.7) ಕಣ್ಣು ನೋವಿನ ಕಾರಣದಿಂದ ಯಶಸ್ವಿನಿ ಕಾಲೇಜಿಗೆ ರಜೆ ಹಾಕಿದ್ದರು. ಗುರುವಾರ ಅವರು ಕಾಲೇಜಿಗೆ ಮರಳಿದಾಗ, ಉಪನ್ಯಾಸಕರು ರಜೆಯ ವಿಷಯವಾಗಿ ಎಲ್ಲ ವಿದ್ಯಾರ್ಥಿಗಳ ಮುಂದೆ ಅತ್ಯಂತ ಕೀಳಾಗಿ ಮಾತನಾಡಿದ್ದಾರೆ ಎನ್ನಲಾಗಿದೆ.

“ಯಾವ ಡ್ರಾಪ್ಸ್ ಹಾಕಿಕೊಂಡೆ? ಎಷ್ಟು ಹನಿ ಹಾಕಿದೆ? ಇಡೀ ಬಾಟಲಿಯನ್ನೇ ಸುರಿದುಕೊಂಡೆಯಾ?” ಎಂದು ವ್ಯಂಗ್ಯವಾಡಿ ಉಪನ್ಯಾಸಕರು ಯಶಸ್ವಿನಿಯನ್ನು ಅವಮಾನಿಸಿದ್ದರು ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲದೆ, ಅವರಿಗೆ ಸೆಮಿನಾರ್ ನೀಡಲು ಅವಕಾಶ ನಿರಾಕರಿಸಿ, ರೇಡಿಯಾಲಜಿ ಕೇಸ್‌ಗಳನ್ನು ನೀಡದೆ ಶೈಕ್ಷಣಿಕವಾಗಿಯೂ ಕಿರುಕುಳ ನೀಡಲಾಗಿತ್ತು ಎಂದು ಮೃತಳ ಕುಟುಂಬಸ್ಥರು ದೂರಿದ್ದಾರೆ.

“ನನ್ನ ಮಗಳಿಗೆ ಕಣ್ಣಿನ ಸಮಸ್ಯೆ ಇದ್ದಿದ್ದರಿಂದ ನನ್ನ ಅನುಮತಿ ಪಡೆದೇ ರಜೆ ಹಾಕಿದ್ದಳು. ಆದರೆ ಕಾಲೇಜಿನ ಉಪನ್ಯಾಸಕರು ಮತ್ತು ಆಡಳಿತ ಮಂಡಳಿ ಅವಳಿಗೆ ಅತಿಯಾದ ಟಾರ್ಚರ್ ನೀಡಿದ್ದಾರೆ. ಅವರಿಗೆ ಮಕ್ಕಳಿಲ್ಲವೇ? ಅವರ ವರ್ತನೆಯಿಂದಲೇ ನನ್ನ ಮಗಳು ಇಂದು ನಮ್ಮೊಂದಿಗಿಲ್ಲ,” ಎಂದು ಮೃತಳ ತಾಯಿ ಕಣ್ಣೀರಿಟ್ಟಿದ್ದಾರೆ.

ಘಟನೆ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಸಹಪಾಠಿಗಳು ಮತ್ತು ಸಂಬಂಧಿಕರು ಶವಾಗಾರದ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ಯಶಸ್ವಿನಿಯ ಸಾವಿಗೆ ಕಾರಣರಾದ ಪ್ರಾಂಶುಪಾಲರು ಮತ್ತು ಸಂಬಂಧಪಟ್ಟ ಉಪನ್ಯಾಸಕರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

error: Content is protected !!