ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂದು ನಾಯಕರಾದ ಮಹೇಶ್ ವಿಕ್ರಮ್ ಹೆಗ್ಡೆ, ಪುನೀತ್ ಕೆರೆಹಳ್ಳಿ ಅವರ ಬಂಧನ ಕಾನೂನು ಬಾಹಿರವಾಗಿದ್ದು, ಇದು ವಾಕ್ ಸ್ವಾತಂತ್ರ್ಯದ ಮೇಲಿನ ಆಕ್ರಮಣ ಎಂದು ಹಿಂದೂ ಜನಜಾಗೃತಿ ಸಮಿತಿ ಆರೋಪಿಸಿದೆ.
ವಿಕ್ರಮ ಟಿವಿಯ ಸಂಪಾದಕರಾಗಿರುವ ಮಹೇಶ್ ವಿಕ್ರಮ್ ಹೆಗ್ಡೆ, ರಾಜ್ಯದಲ್ಲಿ ನಡೆದ ಘಟನೆಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಬಂಧಿಸಿರುವುದು ಭಾರತೀಯ ಸಂವಿಧಾನದ ಕಲಂ ೧೯(೧)(ಎ) ವಾಕ್ ಮತ್ತು ಅಭಿವ್ಯಕ್ತಿಯ ಸ್ವಾತಂತ್ರ್ಯದ ಹಕ್ಕಿಗೆ ಧಕ್ಕೆ ತರುವ ಕೃತ್ಯವಾಗಿದೆ. ರಾಷ್ಟ್ರ ರಕ್ಷಣಾ ಪಡೆ ಸಂಸ್ಥಾಪಕ ಅಧ್ಯಕ್ಷ ಪುನೀತ್ ಕೆರೆಹಳ್ಳಿ ಅವರನ್ನು, ಅವರು ಮದ್ದೂರು ಗಣೇಶೋತ್ಸವ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ ಮತ್ತು ಅಲ್ಲಿ ದ್ವೇಷ ಭಾಷಣ ಮಾಡುವ ಸಾಧ್ಯತೆ ಇದೆ ಎಂಬ ನೆಪದಲ್ಲಿ ಮುಂಜಾಗ್ರತಾ ಬಂಧನಕ್ಕೆ ಒಳಪಡಿಸಿರುವುದು ಕೂಡಾ ಕಾನೂನು ಬಾಹಿರವಾಗಿದೆ. ಸಿಆರ್‌ಪಿಸಿ ಸೆಕ್ಷನ್ ೧೫೧ ಅಡಿಯಲ್ಲಿ ಮುಂಜಾಗ್ರತಾ ಬಂಧನ ಎಂಬುದು ಗಂಭೀರ ಅಪರಾಧ ತಡೆಯಲು ಮಾತ್ರ ಅನ್ವಯವಾಗುತ್ತದೆ. ಆದರೆ ಇಲ್ಲಿ ಯಾವುದೇ ಅಪರಾಧ ನಡೆದಿದೆ ಎಂಬುದು ಸಾಬೀತಾಗಿಲ್ಲ. ಹಾಗಾಗಿ ಈ ಬಂಧನವು ಅಸಂವಿಧಾನಿಕವಾಗಿದೆ ಎಂದು ಸಮಿತಿ ಹೇಳಿದೆ.

ಈ ಬೆಳವಣಿಗೆಗಳು ಸರ್ಕಾರದ ಪಕ್ಷಪಾತಿ ನಿಲುವನ್ನು ತೋರಿಸುತ್ತವೆ. ಅಲ್ಲದೆ ಹಿಂದುಗಳ ಧಾರ್ಮಿಕ ಹಕ್ಕು, ವಾಕ್ ಸ್ವಾತಂತ್ರ್ಯ ಕಸಿಯುವ ಈ ಕೃತ್ಯಗಳನ್ನು ತೀವ್ರವಾಗಿ ಖಂಡಿಸುತ್ತೇವೆ, ಮಹೇಶ್ ವಿಕ್ರಮ ಹೆಗ್ಡೆ, ಪುನೀತ್ ಕೆರೆಹಳ್ಳಿಯವರ ಬಂಧನವನ್ನು ತಕ್ಷಣವೇ ಹಿಂಪಡೆಯಬೇಕು. ಭವಿಷ್ಯದಲ್ಲಿ ಯಾವುದೇ ಹಿಂದು ನಾಯಕ ಅಥವಾ ಧಾರ್ಮಿಕ ಕಾರ್ಯಕ್ರಮಗಳನ್ನು ರಾಜಕೀಯ ಅಥವಾ ಧಾರ್ಮಿಕ ಪಕ್ಷಪಾತದ ಆಧಾರದ ಮೇಲೆ ಗುರಿಯಾಗಿಸುವುದನ್ನು ನಿಲ್ಲಿಸಬೇಕು. ಸಂವಿಧಾನಬದ್ಧ ಹಕ್ಕುಗಳ ರಕ್ಷಣೆಗೆ ಬದ್ಧವಾಗಿರಬೇಕು ಮತ್ತು ರಾಜ್ಯದ ಕಾನೂನು – ಸುವ್ಯವಸ್ಥೆಯನ್ನು ಸಮಾನತೆಯ ಆಧಾರದ ಮೇಲೆ ಪಾಲಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ರಾಜ್ಯ ಸರ್ಕಾವನ್ನು ಆಗ್ರಹಿಸುತ್ತದೆ ಎಂದು ರಾಜ್ಯ ವಕ್ತಾರ ಮೋಹನ ಗೌಡ ತಿಳಿಸಿದ್ದಾರೆ.