ಹೊಸದಿಗಂತ ಡಿಜಿಟಲ್ ಡೆಸ್ಕ್:
ದರ್ಶನ್ ಅಭಿಮಾನಿಗಳು ನನ್ನ ಮೇಲೆ ಹಲ್ಲೆಗೆ ಯತ್ನಿಸಿ, ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ನಟ ಪ್ರಥಮ್ ಅವರು ಬೆಂಗಳೂರು ಗ್ರಾಮಾಂತರ ಎಸ್‌ಪಿ ಕಚೇರಿಗೆ ದೂರು ನೀಡಿದ್ದಾರೆ. ಬೇಕರಿ ರಘು ಮತ್ತು ಗ್ಯಾಂಗ್ ವಿರುದ್ಧ ದೂರು ಸಲ್ಲಿಕೆಯಾಗಿದೆ.
ಇದೇ ವೇಳೆ ಈ ಪ್ರಕರಣದ ಬಗ್ಗೆ ನಟ ದರ್ಶನ್ ಅವರು ಸ್ಪಷನೆ ನೀಡಬೇಕು. ಅಲ್ಲಿಯವರೆಗೆ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುವೆ ಎಂದು ನಟ ಪ್ರಥಮ್ ಹೇಳಿದ್ದಾರೆ.
ಕಳೆದ ಜುಲೈ 22 ರಂದು ದೊಡ್ಡಬಳ್ಳಾಪುರದಲ್ಲಿ ಯಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ಬೇಕರಿ ರಘು ಮತ್ತು ಆತನ ಗ್ಯಾಂಗ್ ನಟ ಪ್ರಥಮ್ ಮೇಲೆ ಹಲ್ಲೆಗೆ ಯತ್ನಿಸಿದ್ದು, ಅಲ್ಲದೆ ಕೊಲೆ ಬೆದರಿಕೆ ಹಾಕಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ವಿಚಾರವಾಗಿ ನಟ ಇದುವರೆಗೂ ದೂರು ನೀಡಿರಲಿಲ್ಲ. ಆದರೆ ಇದೀಗ ಬೆಂಗಳೂರು ಗ್ರಾಮಾಂತರ ಎಸ್‌ಪಿ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಿದ್ದಾರೆ.
ನನ್ನ ಮೇಲೆ ನಡೆದಿರುವ ಹಲ್ಲೆಗೆ ನಟ ದರ್ಶನ್ ಸ್ಪಷ್ಟನೆ ನೀಡಬೇಕು. ನನಗೆ ಹೆಚ್ಚು ಕಡಿಮೆಯಾದರೆ ನೀವೇ ಹೊಣೆ. ದರ್ಶನ್ ಅವರು ಫ್ಯಾನ್ಸ್ ಬಾಯಿ ಮುಚ್ಚಿಸಬೇಕು. ಯಾವುದೇ ನಟರ ಬಗ್ಗೆ ಟ್ರೋಲ್ ಮಾಡಬಾರದು. ನಿಮ್ಮ ಫ್ಯಾನ್ಸ್‌ಗೆ ಹೇಳಿ, ಇಲ್ಲವೆಂದರೆ ನೀವೇ ಜವಾಬ್ದಾರಿ. ಇವತ್ತಿನಿಂದ ಆಮರಣಾಂತ ಉಪವಾಸ ಮಾಡುತ್ತೇನೆ. ನಾನು ಇಲ್ಲೇ ಉಪವಾಸ ಕೂರುವೆ. ದರ್ಶನ್ ಬಂದು ಸ್ಪಷ್ಟನೆ ನೀಡಬೇಕು, ಕನ್ನಡ ಚಿತ್ರರಂಗದಲ್ಲಿನ ಮಾಫಿಯಾ ನಿಲ್ಲಬೇಕು. ನೀವು ಸುಮ್ಮನೆ ಕೂತು ಮಜಾ ತೆಗೆದುಕೊಳ್ಳಬಾರದು ಎಂದು ಕಿಡಿಕಾರಿದ್ದಾರೆ.