ಹೊಸದಿಗಂತ ಡಿಜಿಟಲ್ ಡೆಸ್ಕ್:
ದಳಪತಿ ವಿಜಯ್ ಅಭಿನಯದ ಕೊನೆಯ ಚಿತ್ರ ‘ಜನನಾಯಗನ್’ ಬಿಡುಗಡೆಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ನಡುವೆಯೇ, ಮಹತ್ವದ ನಿರ್ಧಾರವೊಂದು ಹೊರಬಿದ್ದಿದೆ. ಕೇರಳದಲ್ಲಿ ನಡೆಯಬೇಕಿದ್ದ ಚಿತ್ರದ ಬೆಳಗಿನ 4 ಗಂಟೆಯ ಮೊದಲ ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕೃತವಾಗಿ ತಿಳಿಸಲಾಗಿದೆ. ಈ ಬೆಳವಣಿಗೆ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.
ಹೆಚ್. ವಿನೋದ್ ನಿರ್ದೇಶನದ ‘ಜನನಾಯಗನ್’ ಪೊಂಗಲ್ ಹಬ್ಬದ ಪ್ರಯುಕ್ತ ಜನವರಿ 9ರಂದು ವಿಶ್ವದಾದ್ಯಂತ ತೆರೆಕಾಣಲಿದೆ. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರದಲ್ಲಿ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಪ್ರಿಯಾಮಣಿ, ಮಮಿತಾ ಬೈಜು, ಪ್ರಕಾಶ್ ರಾಜ್, ಗೌತಮ್ ವಾಸುದೇವ್ ಮೆನನ್ ಸೇರಿದಂತೆ ದೊಡ್ಡ ತಾರಾಗಣವೇ ಕಾಣಿಸಿಕೊಳ್ಳಲಿದೆ. ಅನಿರುದ್ಧ್ ಸಂಗೀತ ಸಂಯೋಜಿಸಿರುವ ಈ ಚಿತ್ರ ಈಗಾಗಲೇ ಭಾರೀ ಹೈಪ್ ಹುಟ್ಟುಹಾಕಿದೆ.
ಮೊದಲು ಕೇರಳದಲ್ಲಿ ಅಭಿಮಾನಿಗಳ ಬೇಡಿಕೆಗೆ ಅನುಗುಣವಾಗಿ ಬೆಳಿಗ್ಗೆ 4 ಗಂಟೆಗೆ ಮೊದಲ ಶೋ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಕರೂರ್‌ನಲ್ಲಿ ನಡೆದ ಕಾಲ್ತುಳಿತ ಘಟನೆ ಹಿನ್ನೆಲೆಯಲ್ಲಿ ಸುರಕ್ಷತಾ ದೃಷ್ಟಿಯಿಂದ ಈ ನಿರ್ಧಾರವನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಅದರಂತೆ, ಈಗ ಕೇರಳದಲ್ಲಿ ಚಿತ್ರದ ಮೊದಲ ಪ್ರದರ್ಶನವನ್ನು ಬೆಳಿಗ್ಗೆ 6 ಗಂಟೆಗೆ ನಡೆಸಲಾಗುತ್ತದೆ.
ಚಿತ್ರದ ಟ್ರೇಲರ್ ಜನವರಿ 1ರಂದು ಬಿಡುಗಡೆಯಾಗಲಿದ್ದು, ಸೆನ್ಸಾರ್ ಪ್ರಕ್ರಿಯೆಯೂ ಅಂತಿಮ ಹಂತದಲ್ಲಿದೆ. ಇತ್ತೀಚೆಗೆ ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ವಿಜಯ್ ಈ ಸಿನಿಮಾ ತಮ್ಮ ಅಂತಿಮ ಚಿತ್ರ ಎಂದು ಘೋಷಿಸಿದ್ದು, ‘ಜನನಾಯಗನ್’ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

