Tuesday, September 23, 2025

ಬೆಂಗಳೂರು ಗುಂಡಿ ಸಮಸ್ಯೆ: ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಿ.ಸಿ. ಪಾಟೀಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಗುಂಡಿ ಸಮಸ್ಯೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಸಿ.ಸಿ. ಪಾಟೀಲ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, “ಇಂತಹ ಗುಂಡಿಗಳನ್ನು ನಡೆಸೋ ಸರ್ಕಾರ ನಾನು ನೋಡೇ ಇಲ್ಲ. 6 ಸಾವಿರ, 3 ಸಾವಿರ ಗುಂಡಿಗಳಿವೆ ಎನ್ನುತ್ತಾರೆ. ಅಧಿಕಾರಿಗಳನ್ನೇ ಗುಂಡಿ ಮುಚ್ಚಲು ನೇಮಿಸಿರುವುದು ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಇದೇ ಮೊದಲ ಸರ್ಕಾರ” ಎಂದು ಟೀಕಿಸಿದರು.

ಬಿಡಿಎ ಮುಂದೆ ಫ್ಲೈಓವರ್ ಮೇಲೆ ಮಳೆ ಬರುತ್ತಿದ್ದರೂ ಗುಂಡಿ ಮುಚ್ಚುತ್ತಿರುವುದನ್ನು ಕಂಡಿದ್ದೇನೆ ಎಂದು ಪಾಟೀಲ್ ಹೇಳಿದರು. ಮಳೆ ಬಂದಾಗ ಗುಂಡಿ ಮುಚ್ಚುವುದು ವ್ಯರ್ಥ ಕ್ರಮ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇದೇ ವೇಳೆ ಡಿಕೆ ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ನಿವಾಸದ ರಸ್ತೆ ಮುಂದೆಯೂ ಗುಂಡಿಗಳಿವೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಪಾಟೀಲ್, “ಪ್ರಧಾನಿ ಮನೆ ಮುಂದೆ ಗುಂಡಿ ಇದ್ದರೆ ಡಿಕೆಶಿ ಮನೆ ಮುಂದೆ ಲೇಕ್ ಮಾಡಿಸಿಕೊಳ್ಳಲಿ. ನಾವು ಇದ್ದಾಗ ಮಾಡಿಲ್ಲ ಎನ್ನುತ್ತಾರೆ, ಹಾಗಿದ್ದರೆ ನೀವು ಅಧಿಕಾರಕ್ಕೆ ಬಂದದ್ದು ಏಕೆ? ಈಗ ನೀವು ಹೋಗಲು ಸಿದ್ಧರಾಗಿ, ನಾವು ಮತ್ತೆ ಬರ್ತೀವಿ” ಎಂದರು.

ಇದನ್ನೂ ಓದಿ