Monday, September 1, 2025

ಚಪ್ಪಲಿ ಹಾಕುವಾಗ ಜಾಗ್ರತೆ! ಕ್ರಾಕ್ಸ್ ಪಾದರಕ್ಷೆಯಲ್ಲಿ ಕುಳಿತಿದ್ದ ಕೊಳಕಮಂಡಲ ಕಚ್ಚಿ ಟೆಕ್ಕಿ ದುರ್ಮರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಪ್ಪಲಿಯಲ್ಲಿ ಸೇರಿಕೊಂಡಿದ್ದ ಹಾವು ಕಡಿತದಿಂದ ಟೆಕ್ಕಿಯೋರ್ವ ಸಾವನ್ನಪ್ಪಿರುವ ಘಟನೆ ಬನ್ನೇರುಘಟ್ಟದಲ್ಲಿ ನಡೆದಿದೆ.

ಆನೇಕಲ್ ತಾಲೂಕಿನ‌ ಬನ್ನೇರುಘಟ್ಟದ ರಂಗನಾಥ ಬಡಾವಣೆಯ 41 ವರ್ಷದ ಮಂಜು ಪ್ರಕಾಶ್​ ದುರ್ದೈವಿ. ಟಿಸಿಎಸ್ ಕಂಪನಿಯಲ್ಲಿ ಟೆಕ್ಕಿಯಾಗಿರುವ ಮಂಜು ಪ್ರಕಾಶ್​ ಮನೆಯಿಂದ ಹೊರ ಹೋಗುವ ಸಂದರ್ಭದಲ್ಲಿ ಕ್ರಾಕ್ಸ್​​ ಚಪ್ಪಲಿಯನ್ನು ಧರಿಸಿದ್ದರು. ಈ ವೇಳೆ ಅದರಲ್ಲಿ ಅಡಗಿದ್ದ ಕೊಳಕು ಮಂಡಲ ಹಾವು ಕಚ್ಚಿದೆ.

ಮಂಜು ಪ್ರಕಾಶ್​ಗೆ 2016ರಲ್ಲಿ ಸಂಭವಿಸಿದ ಅಪಘಾತದ ಪರಿಣಾಮ ಕಾಲಿನ ಸ್ಪರ್ಶ ಜ್ಞಾನ ಇಲ್ಲದಾಗಿತ್ತು. ಹೀಗಾಗಿ ಹಾವಿನ ಮರಿ ಕಚ್ಚಿದ ಅನುಭವ ಗಮನಕ್ಕೆ ಬಾರದ್ದರಿಂದ ಪ್ರಾಣ ಕಳೆದುಕೊಂಡಿದ್ದಾರೆ. ಹಾವಿನ ಮರಿ ಕಾಲಿನ ಹೆಬ್ಬರಳಿಗೆ ಕಡಿದಿದೆ. ಸ್ಪರ್ಶ ಜ್ಞಾನ ಇಲ್ಲದಿದ್ದರಿಂದ ಮುಕ್ಕಾಲು ಗಂಟೆಗಳ ಕಾಲ ಅದೇ ಚಪ್ಪಲಿಯಲ್ಲಿ ಹಾವಿನೊಂದಿಗೆ ಓಡಾಡಿ ಮನೆಗೆ ಬಂದಿದ್ದಾರೆ. ಆಗಲೂ ಗೊತ್ತಾಗದೇ ಮನೆಗೆ ಬಂದು ಮಲಗಿದ್ದ ಪ್ರಕಾಶ್​ ಸ್ವಲ್ಪ ಸಮಯದಲ್ಲಿ ಸಾವನ್ನಪ್ಪಿದ್ದಾರೆ. ಹಾಗೇ ಹಾವಿನ ಮರಿ ಕೂಡ ಚಪ್ಪಲಿಯಲ್ಲಿಯೇ ಕಾಲಿನ ಒತ್ತಡಕ್ಕೆ ಸಿಲುಕಿ ಸಾವನ್ನಪ್ಪಿದೆ.

ಇದಾದ ಸ್ವಲ್ಪ ಸಮಯದ ಬಳಿಕ ಕಾರ್ಮಿಕನೋರ್ವ ಇವರ ಮನೆಗೆ ಬಂದಾಗ ಮಂಜು ಪ್ರಕಾಶ್ ಚಪ್ಪಲಿಯಲ್ಲಿ ಹಾವಿರುವುದನ್ನು ಕಂಡು ಮಂಜು ಅವರ ತಾಯಿ-ತಂದೆಗೆ ತಿಳಿಸಿದ್ದಾನೆ. ತಕ್ಷಣ ಮಲಗಿದ್ದ ಮಗನನ್ನು ನೋಡಲು ಹೋದಾಗ ಮಂಜು ಪ್ರಕಾಶ್ ಅವರ​ ಬಾಯಲ್ಲಿ ನೊರೆ ಬಂದಿದ್ದು, ಸಾವನ್ನಪ್ಪಿದ್ದರು. ಕೂಡಲೇ‌ ಎರಡು-ಮೂರು ಆಸ್ಪತ್ರೆಗಳಿಗೆ ಸಾಗಿಸಿ ಪ್ರಯತ್ನಿಸಲಾಗಿತ್ತು. ಆದರೆ ಮಂಜು ಅವರ ಸಾವು ಖಚಿತವಾಗಿತ್ತು. ಸದ್ಯ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ