ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ರೈಲ್ವೆ ಸಚಿವಾಲಯವು ಬೆಂಗಳೂರು–ಕೊಚ್ಚಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಶೀಘ್ರದಲ್ಲೇ ಸಾರ್ವಜನಿಕ ಸೇವೆ ಪ್ರಾರಂಭಿಸಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್, ದಕ್ಷಿಣ ಭಾರತದಲ್ಲಿ ಸಂಚಾರ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುವ ನಿರೀಕ್ಷೆಯಿದೆ.
ಅಧಿಸೂಚನೆಯ ಪ್ರಕಾರ, ರೈಲು ಸಂಖ್ಯೆ 26651 ಕೆಎಸ್‌ಆರ್ ಬೆಂಗಳೂರು–ಎರ್ನಾಕುಲಂ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರತಿ ದಿನ ಬೆಳಗ್ಗೆ 5:10ಕ್ಕೆ ಬೆಂಗಳೂರು ನಿಲ್ದಾಣದಿಂದ ಹೊರಳಿ, ಮಧ್ಯಾಹ್ನ 1:50ಕ್ಕೆ ಎರ್ನಾಕುಲಂ ಜಂಕ್ಷನ್ ತಲುಪಲಿದೆ. ಮರಳಿ ಪ್ರಯಾಣಕ್ಕಾಗಿ, ರೈಲು ಸಂಖ್ಯೆ 26652 ಎರ್ನಾಕುಲಂನಿಂದ ಮಧ್ಯಾಹ್ನ 2:20ಕ್ಕೆ ಹೊರಟು, ರಾತ್ರಿ 11:00ಕ್ಕೆ ಬೆಂಗಳೂರಿಗೆ ಆಗಮಿಸಲಿದೆ.
ಈ ರೈಲು ಕೃಷ್ಣರಾಜಪುರಂ, ಸೇಲಂ, ಈರೋಡ್, ತಿರುಪ್ಪೂರು, ಕೊಯಮತ್ತೂರು, ಪಾಲಕ್ಕಾಡ್ ಮತ್ತು ತ್ರಿಶೂರ್ ನಿಲ್ದಾಣಗಳಲ್ಲಿ ನಿಗದಿತ ನಿಲುಗಡೆ ಇರಲಿದೆ. ನಿಯಮಿತ ಸೇವೆ ಆರಂಭಕ್ಕೂ ಮೊದಲು ಪರೀಕ್ಷಾರ್ಥ ವಿಶೇಷ ರೈಲು ಸಂಚಾರ ಸಾಧ್ಯತೆಯೂ ಇದೆ. ದಕ್ಷಿಣ ಹಾಗೂ ನೈಋತ್ಯ ರೈಲ್ವೆ ವಲಯಗಳಿಗೆ ತ್ವರಿತ ಸಿದ್ಧತೆ ಮಾಡಲು ಸಚಿವಾಲಯ ನಿರ್ದೇಶನ ನೀಡಿದೆ.
ಅಕ್ಟೋಬರ್ ಆರಂಭದಲ್ಲಿಯೇ ಬೆಂಗಳೂರಿನಿಂದ ಕೇರಳದ ಪ್ರಮುಖ ನಗರಗಳಾದ ತ್ರಿಶೂರ್ ಮತ್ತು ಪಾಲಕ್ಕಾಡ್‌ಗಳೊಂದಿಗೆ ಸಂಪರ್ಕಿಸುವ ಈ ವಿಶೇಷ ರೈಲುಗಳ ಕುರಿತ ಘೋಷಣೆ ಮಾಡಲಾಗಿತ್ತು.

