Tuesday, December 30, 2025

ವರುಷದ ಕೊನೆಯ ದಿನ ಕಿಚ್ಚನಿಂದ ಬಿಗ್ ಗಿಫ್ಟ್: ಅಭಿಮಾನಿಗಳ ಜೊತೆ ‘ಮಾರ್ಕ್’ ನೋಡಲಿದ್ದಾರೆ ಸುದೀಪ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಸಿನಿಮಾ ಬಿಡುಗಡೆಯಾದ ಕೇವಲ ನಾಲ್ಕೇ ದಿನಗಳಲ್ಲಿ ಬರೋಬ್ಬರಿ 35 ಕೋಟಿ ರೂಪಾಯಿ ಗಳಿಸುವ ಮೂಲಕ ‘ಮಾರ್ಕ್’ ಸೂಪರ್ ಹಿಟ್ ಲಿಸ್ಟ್ ಸೇರಿದೆ. ಈ ಯಶಸ್ಸಿನ ಖುಷಿಯನ್ನು ಹಂಚಿಕೊಳ್ಳಲು ಸುದೀಪ್ ಈಗ ಅಭಿಮಾನಿಗಳ ಬಳಿಯೇ ಬರುತ್ತಿದ್ದಾರೆ.

ಸಾಮಾನ್ಯವಾಗಿ ಮೊದಲ ದಿನ ಸಿನಿಮಾ ನೋಡುವುದನ್ನು ತಪ್ಪಿಸುತ್ತಿದ್ದ ಸುದೀಪ್, ಈ ಬಾರಿ ಸಕ್ಸಸ್ ಸಂಭ್ರಮಕ್ಕಾಗಿ ವಿಶೇಷ ಪ್ಲಾನ್ ಮಾಡಿಕೊಂಡಿದ್ದಾರೆ. ಈ ಹಿಂದೆ ಭರವಸೆ ನೀಡಿದ್ದಂತೆ, ಡಿಸೆಂಬರ್ 31ರಂದು ಅವರು ಬೆಂಗಳೂರು ಮತ್ತು ಮೈಸೂರಿನ ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಲಿದ್ದಾರೆ.

ಡಿಸೆಂಬರ್ 31ರಂದು ಬೆಳಿಗ್ಗೆ 10:30ಕ್ಕೆ ಗಾಂಧಿನಗರದ ಐತಿಹಾಸಿಕ ಸಂತೋಷ್ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ಸುದೀಪ್ ಸಿನಿಮಾ ನೋಡಲಿದ್ದಾರೆ.

ಬೆಂಗಳೂರಿನ ಶೋ ಮುಗಿದ ಬೆನ್ನಲ್ಲೇ ಮೈಸೂರಿಗೆ ಪ್ರಯಾಣಿಸಲಿರುವ ಅವರು, ಸಂಜೆ 4:30ಕ್ಕೆ ಸಂಗಮ ಚಿತ್ರಮಂದಿರದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ‘ಮಾರ್ಕ್’ ವೀಕ್ಷಿಸಲಿದ್ದಾರೆ.

ಕಳೆದ ವರ್ಷವೂ ಡಿಸೆಂಬರ್ 31ರಂದು ‘ಮ್ಯಾಕ್ಸ್’ ಸಿನಿಮಾವನ್ನು ಪತ್ನಿ ಪ್ರಿಯಾ ಹಾಗೂ ಚಿತ್ರತಂಡದ ಜೊತೆ ನರ್ತಕಿ ಥಿಯೇಟರ್‌ನಲ್ಲಿ ವೀಕ್ಷಿಸಿ ಹೊಸ ವರ್ಷವನ್ನು ಸ್ವಾಗತಿಸಿದ್ದರು. ಈ ಬಾರಿಯೂ ಅದೇ ಸಂಪ್ರದಾಯವನ್ನು ಮುಂದುವರಿಸುತ್ತಿರುವ ಕಿಚ್ಚ, ಅಭಿಮಾನಿಗಳ ಪ್ರೀತಿಗೆ ಬೆಲೆ ಕೊಟ್ಟು ಥಿಯೇಟರ್‌ಗೆ ಬರಲು ಸಜ್ಜಾಗಿದ್ದಾರೆ.

ಸಿನಿಮಾ ಚೆನ್ನಾಗಿ ಓಡಿದರೆ ಖಂಡಿತ ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತೇನೆ ಎಂದು ಈ ಹಿಂದೆ ಮಾಧ್ಯಮದವರಿಗೆ ನೀಡಿದ್ದ ಮಾತನ್ನು ಸುದೀಪ್ ಈಗ ಉಳಿಸಿಕೊಂಡಿದ್ದಾರೆ.

error: Content is protected !!