ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ಬಾಸ್ ಸೀಸನ್ 12’ ದಿನದಿಂದ ದಿನಕ್ಕೆ ಹೊಸ ದಾಖಲೆಗಳನ್ನು ಬರೆಯುತ್ತಿದೆ. ವಾರದ ಐದು ದಿನದ ಡ್ರಾಮಾ ಒಂದು ಕಡೆಯಾದರೆ, ಶನಿವಾರ ಮತ್ತು ಭಾನುವಾರದ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಗಳೇ ಈ ಶೋನ ಅಸಲಿ ಜೀವಾಳ. ನಟ ಕಿಚ್ಚ ಸುದೀಪ್ ಅವರ ಖಡಕ್ ನಿರೂಪಣೆಗಾಗಿ ಕೋಟ್ಯಂತರ ವೀಕ್ಷಕರು ಕಾಯುತ್ತಿರುತ್ತಾರೆ. ಆದರೆ, ಮುಂದಿನ ವಾರದ ಸಂಚಿಕೆಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆತಂಕಕಾರಿ ಸುದ್ದಿಯೊಂದು ಹರಿದಾಡುತ್ತಿದೆ.
ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ‘ಮಾರ್ಕ್’ ಸಿನಿಮಾ ಇದೇ ಡಿಸೆಂಬರ್ 25ರಂದು ವಿಶ್ವಾದ್ಯಂತ ತೆರೆಕಾಣುತ್ತಿದೆ. ಸಿನಿಮಾ ಬಿಡುಗಡೆಯ ಸಂಭ್ರಮ ಹಾಗೂ ಪ್ರಚಾರ ಕಾರ್ಯಗಳಲ್ಲಿ ಸುದೀಪ್ ಬ್ಯುಸಿಯಾಗಿರಲಿರುವುದರಿಂದ, ಡಿಸೆಂಬರ್ 27 ಮತ್ತು 28ರ ಬಿಗ್ಬಾಸ್ ಸಂಚಿಕೆಗಳಿಗೆ ಅವರು ಅಲಭ್ಯರಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕೇವಲ ವೀಕ್ಷಕರು ಮಾತ್ರವಲ್ಲದೆ, ಮನೆಯೊಳಗಿರುವ ಸ್ಪರ್ಧಿಗಳೂ ಸಹ ಶನಿವಾರಕ್ಕಾಗಿ ಕಾತರದಿಂದ ಕಾಯುತ್ತಿರುತ್ತಾರೆ. ಇಡೀ ವಾರದಲ್ಲಿ ನಡೆದ ಗೊಂದಲಗಳಿಗೆ ಸುದೀಪ್ ಪಂಚಾಯಿತಿಯಲ್ಲಿ ಪರಿಹಾರ ಸಿಗುತ್ತದೆ ಎಂಬ ನಂಬಿಕೆ ಅವರದ್ದು. ಸುದೀಪ್ ಅವರ ಕಿವಿಮಾತುಗಳು ಸ್ಪರ್ಧಿಗಳಿಗೆ ಮುಂದಿನ ವಾರದ ಆಟಕ್ಕೆ ‘ಎನರ್ಜಿ ಬೂಸ್ಟರ್’ ಇದ್ದಂತೆ. ಈಗ ಅವರ ಅನುಪಸ್ಥಿತಿ ಸ್ಪರ್ಧಿಗಳ ಮೇಲೂ ಪರಿಣಾಮ ಬೀರಲಿದೆ.
ಒಂದು ವೇಳೆ ಸುದೀಪ್ ಬರದೇ ಇದ್ದರೆ, ಅವರ ಸ್ಥಾನದಲ್ಲಿ ಯಾರು ನಿಂತು ಪಂಚಾಯಿತಿ ನಡೆಸಲಿದ್ದಾರೆ ಎಂಬುದು ಈಗಿರುವ ದೊಡ್ಡ ಪ್ರಶ್ನೆ. ಚಂದನವನದ ದೊಡ್ಡ ನಟರೊಬ್ಬರು ಅಥವಾ ಖ್ಯಾತ ನಿರ್ದೇಶಕರೊಬ್ಬರು ವೇದಿಕೆ ಏರಲಿದ್ದಾರೆಯೇ ಎಂಬ ಕುತೂಹಲ ವೀಕ್ಷಕರಲ್ಲಿ ಮನೆ ಮಾಡಿದೆ.

