Thursday, September 18, 2025

ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ ಬಿಗ್ ಬಾಸ್ ರಂಜಿತ್‌! ಕಾರಣ ಏನ್ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್‌ ಬಾಸ್ ಖ್ಯಾತಿಯ ರಂಜಿತ್ ವಿರುದ್ಧ ಜೀವ ಬೆದರಿಕೆ ಆರೋಪದಡಿ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜಗದೀಶ್ ಎಂಬುವವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಎನ್‌ಸಿಆರ್ (NCR) ದಾಖಲಿಸಿದ್ದಾರೆ.

ಏನಿದು ವಿವಾದ?
2018ರಿಂದ ಅಮೃತಹಳ್ಳಿಯ ಫ್ಲ್ಯಾಟ್‌ನಲ್ಲಿ ಜಗದೀಶ್ ಮತ್ತು ಅವರ ಕುಟುಂಬ ವಾಸವಾಗಿದ್ದರು. ನಂತರ 2025ರಲ್ಲಿ ಇದೇ ಮನೆಯಲ್ಲಿ ರಂಜಿತ್ ತಮ್ಮ ಅಕ್ಕ ಹಾಗೂ ಪತ್ನಿಯೊಂದಿಗೆ ವಾಸಿಸಲು ಬಂದಿದ್ದರು. ಮನೆಯನ್ನು ತನ್ನದೇ ಆಸ್ತಿ ಎಂದು ಹೇಳಿಕೊಂಡು ಅಕ್ಕ-ತಮ್ಮನ ನಡುವೆ ಗಲಾಟೆ ಆರಂಭವಾಯಿತು.

ಈ ಗಲಾಟೆಯಲ್ಲಿ ರಂಜಿತ್ ಹಾಗೂ ಅವರ ಪತ್ನಿ, ಅಕ್ಕ-ಬಾವ ನಡುವೆ ತೀವ್ರ ವಾಗ್ವಾದ ನಡೆದು, ಒಬ್ಬರಿಗೊಬ್ಬರು ಹಲ್ಲೆಗೂ ಮುಂದಾಗಿದ್ದಾರೆ. ರಂಜಿತ್ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿರುವ ಜಗದೀಶ್, ಮನೆಯಲ್ಲಿ ನಡೆದ ವಾಗ್ವಾದದ ವೀಡಿಯೋವನ್ನು ಪೊಲೀಸರಿಗೆ ಸಾಕ್ಷ್ಯವಾಗಿ ನೀಡಿದ್ದಾರೆ.

ದೂರು ದಾಖಲಾಗುತ್ತಿದ್ದಂತೆಯೇ ಪೊಲೀಸರು ರಂಜಿತ್ ಅವರನ್ನು ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಿದರು. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಗಲಾಟೆ ಮಾಡಬಾರದು ಎಂದು ಎಚ್ಚರಿಕೆ ನೀಡಿ, ವಿವಾದವನ್ನು ನ್ಯಾಯಾಲಯದ ಮೂಲಕ ಬಗೆಹರಿಸಿಕೊಳ್ಳಲು ಸೂಚನೆ ನೀಡಿ ಕಳುಹಿಸಿದರು.

ಇದನ್ನೂ ಓದಿ