Monday, December 15, 2025

ಬಿಗ್ ಬಾಸ್‌ನಲ್ಲಿ ಗಿಲ್ಲಿ ಹವಾ: ವೈರಲ್ ಆಯ್ತು ಶಿವಣ್ಣ ಕೊಟ್ಟ ಮಾತು, ನಟನಿಗೆ ಭರ್ಜರಿ ಆಫರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸದ್ಯ ಬಿಗ್ ಬಾಸ್ ಮನೆಯಲ್ಲಿರುವ ನಟ ಗಿಲ್ಲಿ, ತಮ್ಮ ವಿಶಿಷ್ಟ ಹಾಸ್ಯಪ್ರಜ್ಞೆ ಮತ್ತು ಡೈಲಾಗ್ ಡೆಲಿವರಿಯ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಅವರು ಈಗಾಗಲೇ ‘ಡೆವಿಲ್’ ಸಿನಿಮಾದಲ್ಲಿ ಕಾಮಿಡಿ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಆದರೆ, ಗಿಲ್ಲಿ ಅವರ ವೃತ್ತಿಜೀವನಕ್ಕೆ ಒಂದು ದೊಡ್ಡ ತಿರುವು ಸಿಕ್ಕಿದ್ದು ಬಹುಕಾಲದ ಹಿಂದೆಯೇ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಗಿಲ್ಲಿಯವರ ನಟನೆಗೆ ಮನಸೋತು ಸಿನಿಮಾ ಮಾಡುವ ಭರವಸೆ ನೀಡಿದ್ದ ಹಳೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಗಿಲ್ಲಿ ಅವರ ಅಭಿಮಾನಿಗಳು ಈ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ, ಶಿವಣ್ಣನ ಮಾತು ನಿಜವಾಗಬೇಕು ಎಂದು ಹಾರೈಸುತ್ತಿದ್ದಾರೆ.

ಗಿಲ್ಲಿ ನಟ ಅವರು ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ರಿಯಾಲಿಟಿ ಶೋನಲ್ಲಿ ‘ನಾನ್-ಡ್ಯಾನ್ಸರ್’ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಈ ಶೋನಲ್ಲಿ ಶಿವರಾಜ್‌ಕುಮಾರ್ ಅವರು ತೀರ್ಪುಗಾರರ ಸ್ಥಾನದಲ್ಲಿದ್ದರು. ಡ್ಯಾನ್ಸ್ ಪ್ರದರ್ಶನದ ನಂತರ ಗಿಲ್ಲಿ ಅವರ ನಿರರ್ಗಳ ಮಾತು, ಚುರುಕಾದ ಕಾಮಿಡಿ ಟೈಮಿಂಗ್ ಮತ್ತು ವರ್ತನೆಯಿಂದ ಶಿವಣ್ಣ ಬಹಳ ಪ್ರಭಾವಿತರಾಗಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿವಣ್ಣ, “ಇವರನ್ನು ಹಾಕಿಕೊಂಡು ನಿಜವಾಗಲೂ ಒಂದು ಸಿನಿಮಾ ಮಾಡಬೇಕು. ಗಿಲ್ಲಿಯವರನ್ನು ನೋಡಿದಾಗಲೆಲ್ಲ ನನಗೆ ತಮಿಳು ಚಿತ್ರರಂಗದ ಅದ್ಭುತ ಹಾಸ್ಯ ನಟ ಚಂದ್ರಬಾಬು ನೆನಪಾಗುತ್ತಾರೆ. ನಾನು ಖಂಡಿತ ಇವರೊಂದಿಗೆ ಸಿನಿಮಾ ಮಾಡುತ್ತೇನೆ,” ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಆ ಸಮಯಕ್ಕೆ ಶೋಗೆ ಆಗಮಿಸಿದ್ದ ದಿನಕರ್ ತೂಗುದೀಪ ಕೂಡ ಗಿಲ್ಲಿಯವರ ಮಾತಿನ ಶೈಲಿಯನ್ನು ಮೆಚ್ಚಿಕೊಂಡಿದ್ದರು.

ಒಟ್ಟಿನಲ್ಲಿ, ಬಿಗ್ ಬಾಸ್‌ನಿಂದ ಹೊರಬರುತ್ತಿದ್ದಂತೆಯೇ ಗಿಲ್ಲಿ ಅವರು ಶಿವರಾಜ್‌ಕುಮಾರ್ ಅವರ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆಯೇ ಅಥವಾ ಬೇರೆ ದೊಡ್ಡ ಪ್ರಾಜೆಕ್ಟ್‌ಗಳಿಗೆ ಸಹಿ ಹಾಕುತ್ತಾರೆಯೇ ಎಂಬುದನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.

error: Content is protected !!