ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದಲ್ಲಿ ಕೈಗೆತ್ತಿಕೊಂಡಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ, ಮುಂದಿನ ದಿನಗಳಲ್ಲಿ ಬೇರೆ ರಾಜ್ಯಗಳಲ್ಲೂ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ದೆಹಲಿಯಲ್ಲಿಂದು ಹೇಳಿದ್ದಾರೆ.
ಕಳೆದ 20 ವರ್ಷದಿಂದ ಅನೇಕ ರಾಜಕೀಯ ಪಕ್ಷಗಳು ಮತದಾರರ ಪಟ್ಟಿಯನ್ನು ಸಮಗ್ರವಾಗಿ ಪರಿಷ್ಕರಿಸುವಂತೆ ಕೇಳಿಕೊಂಡಿದ್ದವು. ಅದರಂತೆ ಈ ಕಾರ್ಯವನ್ನು ಬಿಹಾರದಿಂದ ಆರಂಭಿಸಿದ್ದು, ಎಲ್ಲಾ ಮತದಾರರು, ಬೂತ್ ಮಟ್ಟದ ಅಧಿಕಾರಿಗಳು ಮತ್ತು ವಿವಿಧ ರಾಜಕೀಯ ಪಕ್ಷಗಳಿಂದ ನಾಮನಿರ್ದೇಶನಗೊಂಡ 1 ಲಕ್ಷ 60 ಸಾವಿರ ಬೂತ್ ಮಟ್ಟದ ಏಜೆಂಟ್‌ಗಳು ಜಂಟಿಯಾಗಿ ಕರಡು ಪಟ್ಟಿಯನ್ನು ಸಿದ್ಧಪಡಿಸಿದರು. ಅದರಂತೆ ಪ್ರಕ್ರಿಯೆ ಆರಂಭವಾಗಿದ್ದು ಬಿಹಾರದಲ್ಲಿ 7 ಕೋಟಿ ಮತದಾರಿದ್ದಾರೆ ಎಂದು ತಿಳಿಸಿದರು.
ಚುನಾವಣಾ ಆಯೋಗದ ವಿರುದ್ಧ ಮತಗಳ್ಳತನವೆಂಬ ಪದ ಬಳಕೆ ಮಾಡುವುದು ಸರಿಯಲ್ಲ. ಬೂತ್ ಮಟ್ಟದ ಅಧಿಕಾರಿಗಳು ರಾಜಕೀಯ ಪಕ್ಷಗಳೊಂದಿಗೆ ಸೇರಿ ಡ್ರಾಫ್ಟ್ ರಚಿಸುತ್ತಾರೆ. ಅದಾದ ಬಳಿಕ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು 45 ದಿನಗಳು ಸಮಯಾವಕಾಶ ಕೊಡಲಾಗುತ್ತದೆ. ಈ ಅವಧಿಯಲ್ಲಿ ತಪ್ಪುಗಳಾಗಿದ್ದಲ್ಲಿ ತಿದ್ದಿ-ಕೊಳ್ಳಬಹುದು. ಅದಕ್ಕಾಗಿ ಎಲ್ಲಾ ರಾಜಕೀಯ ಪಕ್ಷಗಳು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಹೊಂದಿರುತ್ತವೆ. ಮತದಾರರು ತಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡಿದ ನಲವತ್ತೈದು ದಿನಗಳ ಒಳಗೆ ಹೈಕೋರ್ಟ್‌ನಲ್ಲಿ ಚುನಾವಣಾ ಅರ್ಜಿ ಸಲ್ಲಿಸದಿದ್ದರೆ, ಮತ್ತು ‘ಮತ ಕಳ್ಳತನ’ದಂತಹ ಪದಗಳನ್ನು ಬಳಸಿಕೊಂಡು ಸಾರ್ವಜನಿಕರನ್ನು ದಾರಿ ತಪ್ಪಿಸಲು ವಿಫಲ ಪ್ರಯತ್ನ ಮಾಡಿದರೆ, ಅದು ಭಾರತದ ಸಂವಿಧಾನಕ್ಕೆ ಮಾಡಿದ ಅವಮಾನ. ಚುನಾವಣಾ ಆಯೋಗಕ್ಕೆ ಎಲ್ಲಾ ಪಕ್ಷಗಳು ಸಮಾನ, ರಾಜಕೀಯ ಪಕ್ಷಗಳ ನಡುವೆ ತಾರತಮ್ಯ ಮಾಡುವುದಿಲ್ಲ. ಆಯೋಗ ಸಂವಿಧಾನಬದ್ಧವಾಗಿ ಕರ್ತವ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು. ಮತಗಳ್ಳತನ ಮತ್ತು ಎರಡು ಬಾರಿ ಮತದಾನದ ಬಗ್ಗೆ ಆರೋಪ ಮಾಡುವವರಿಗೆ ಪುರಾವೆ ಕೇಳಿದರೆ ಯಾವುದೇ ದಾಖಲೆ ಸಮೇತ , ಸ್ಪಷ್ಟ ಉತ್ತರ ನೀಡುವುದಿಲ್ಲ. ಹೀಗೆ ಸುಳ್ಳು ಆರೋಪ ಮಾಡುವವರು ದೇಶದ ಮತದಾರರ ಬಳಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.
ಹಾಗು ಸೆಪ್ಟೆಂಬರ್ 1ರೊಳಗೆ ಬಿಹಾರ ಮತದಾರರ ಪಟ್ಟಿಯಲ್ಲಿನ ದೋಷಗಳನ್ನು ಗುರುತಿಸುವಂತೆ ಎಲ್ಲಾ ರಾಜಕೀಯ ಪಕ್ಷಗಳಿಗೆ ಆಯೋಗ ಸೂಚಿಸಿದೆ.