ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಶಾಸಕ ಭೈರತಿ ಬಸವರಾಜ್ಗೆ ಮತ್ತೆ ಸಂಕಷ್ಟ ಎದುರಾಗಿದೆ. ಬಂಧನದಿಂದ ರಕ್ಷಣೆ ಆದೇಶ ತೆರವಿಗೆ ಹೈಕೋರ್ಟ್ ಗೆ ಸರ್ಕಾರದಿಂದ ಅರ್ಜಿ ಸಲ್ಲಿಸಲಾಗಿದೆ.
ಸದ್ಯ ವಾದ-ಪ್ರತಿವಾದ ಆಲಿಸಿರುವ ನ್ಯಾ. ಸುನಿಲ್ ದತ್ ಯಾದವ್ ಅವರಿದ್ದ ಹೈಕೋರ್ಟ್ ಪೀಠ, ಅ.23ಕ್ಕೆ ಅಂತಿಮ ವಿಚಾರಣೆಯನ್ನು ನಿಗದಿಪಡಿಸಿದೆ. ಅಲ್ಲಿಯವರೆಗೆ ಬಂಧನದಿಂದ ರಕ್ಷಣೆ ಮುಂದುವರಿಸಿದ್ದು, ತನಿಖಾ ಸಂಸ್ಥೆಗಳನ್ನು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಬಿಡಬೇಕು ಎಂದು ಪೀಠ ಅಭಿಪ್ರಾಯ ಪಟ್ಟಿದೆ.
ಭೈರತಿ ಬಸವರಾಜ್ ಪರ ಹಿರಿಯ ವಕೀಲ ಸಂದೇಶ್ ಚೌಟ ವಾದ ಮಂಡಿಸಿದ್ದು, ಈ ಪ್ರಕರಣದಲ್ಲಿ ಪೊಲೀಸರು ಕೋಕಾ ಕಾಯ್ದೆ ಹಾಕಿದ್ದಾರೆ. ಸಂಘಟಿತ ಅಪರಾಧಕ್ಕೆ ಮಾತ್ರ ಕೋಕಾ ಕಾಯ್ದೆ ಹಾಕಬಹುದು. ಮಧ್ಯಂತರ ರಕ್ಷಣೆ ತೆರವುಗೊಳಿಸಿದರೆ ಕೋಕಾ ಕಾಯ್ದೆಯಡಿ ನಿರೀಕ್ಷಣಾ ಜಾಮೀನಿಗೆ ಅವಕಾಶವಿಲ್ಲ. ರಾಜಕೀಯ ದ್ವೇಷದಿಂದ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ಕೋರಲು ಚಿಂತಿಸುತ್ತಿದ್ದೇವೆ. ಹೀಗಾಗಿ ಮಧ್ಯಂತರ ರಕ್ಷಣೆ ತೆರವುಗೊಳಿಸದಂತೆ ಮನವಿ ಮಾಡಿದರು.
ಎಸ್‌ಪಿಪಿ ಬಿ.ಎನ್.ಜಗದೀಶ್ ಆಕ್ಷೇಪ ವ್ಯಕ್ತಪಡಿಸಿದರು. ತನಿಖೆಗೆ ಹಾಜರಾದ ವೇಳೆ ಭೈರತಿ ಬಸವರಾಜು ಸುಳ್ಳು ಮಾಹಿತಿ ನೀಡಿದ್ದಾರೆ. ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕಿದೆ. ಈ ಪ್ರಕರಣದಲ್ಲಿ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ ಎಂದರು.
ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ಅಂತಿಮ ವಿಚಾರಣೆ ಅ.23ಕ್ಕೆ ನಿಗದಿಪಡಿಸಿದೆ.