Saturday, October 18, 2025

ಬಿಜೆಪಿ ನಾಯಕರ ಭದ್ರತೆ ಕಡಿತ: ಸರ್ಕಾರದ ನಡೆಗೆ ಪ್ರತಿಪಕ್ಷ ಕೆಂಡಾಮಂಡಲ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಸರ್ಕಾರವು ಪ್ರಮುಖ ರಾಜಕೀಯ ನಾಯಕರಿಗೆ ನೀಡಲಾಗಿದ್ದ ಭದ್ರತೆಯಲ್ಲಿ ಪರಿಷ್ಕರಣೆ ನಡೆಸಿದೆ. ಬಿಜೆಪಿ ನಾಯಕರ ಭದ್ರತೆ ಕಡಿತಗೊಂಡಿದ್ದು, ಅದೇ ವೇಳೆ ಕಾಂಗ್ರೆಸ್ ನಾಯಕರಿಗೆ ಹೆಚ್ಚುವರಿ ಭದ್ರತೆ ನೀಡಲಾಗಿದೆ. ಇದು ಪ್ರತಿಪಕ್ಷದವರ ಆಕ್ರೋಶಕ್ಕೆ ಕಾರಣವಾಗಿದೆ.

ಪರಿಷತ್‌ ಸಭೆಯ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರ ನಿವಾಸಕ್ಕೆ ಮೊದಲು ಮೂವರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆದರೆ, ಇತ್ತೀಚಿನ ಪರಿಷ್ಕರಣೆಯಡಿ ಮೂರೂ ಭದ್ರತಾ ಗಾರ್ಡ್‌ಗಳನ್ನು ಹಿಂಪಡೆದಿದೆ. ಈ ನಿರ್ಧಾರವು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಕಾಂಗ್ರೆಸ್ ಸಚಿವರಿಗೆ ಹೆಚ್ಚುವರಿ ಭದ್ರತೆ
ಮತ್ತೊಂದೆಡೆ, ಸಚಿವ ಎಚ್.ಸಿ. ಮಹದೇವಪ್ಪ ಅವರಿಗೆ ಹೆಚ್ಚುವರಿ ಭದ್ರತೆ ನೀಡುವ ಆದೇಶ ಹೊರಡಿಸಲಾಗಿದೆ. ಅವರ ನಿವಾಸ ಮತ್ತು ಸಂಚಾರದ ವೇಳೆ ಸುರಕ್ಷತೆ ಕಾಪಾಡಲು ಬೆಂಗಾವಲು ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸಲಾಗಿದೆ.

ಇನ್ನು ಹಿರಿಯನಾಯಕ ಕೆ.ಎಸ್. ಈಶ್ವರಪ್ಪ ಅವರಿಗೂ ಈ ಪರಿಷ್ಕರಣೆ ಪರಿಣಾಮ ಬೀರಿದೆ. ಅವರ ನಿವಾಸದಲ್ಲಿದ್ದ ಭದ್ರತಾ ಗಾರ್ಡ್ ಹಾಗೂ ಬೆಂಗಾವಲು ಭದ್ರತೆ ಎರಡನ್ನೂ ಪೊಲೀಸ್ ಇಲಾಖೆ ಹಿಂಪಡೆದಿದೆ. ಇದೇ ರೀತಿ, ಶಂಕರ್ ಬಿದರಿ ಮತ್ತು ಸಂತೋಷ್ ಗುರೂಜಿ ಅವರಿಗೆ ನೀಡಲಾಗಿದ್ದ ಭದ್ರತಾ ಸೌಲಭ್ಯಗಳನ್ನೂ ಸರ್ಕಾರ ಸಂಪೂರ್ಣವಾಗಿ ವಾಪಸ್ ಪಡೆದಿದೆ.

ಸರ್ಕಾರದ ಈ ಕ್ರಮವು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗಳಿಗೆ ಕಾರಣವಾಗಿದೆ. ಬಿಜೆಪಿ ವಲಯದಿಂದ ಸರ್ಕಾರವು ರಾಜಕೀಯ ಪೂರಕವಾದ ರೀತಿಯಲ್ಲಿ ಭದ್ರತಾ ಸಿಬ್ಬಂದಿ ಹಂಚಿಕೆಯನ್ನು ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ ಸರ್ಕಾರದ ಮೂಲಗಳು, ಈ ಪರಿಷ್ಕರಣೆ ಸಾಮಾನ್ಯ ಭದ್ರತಾ ಮೌಲ್ಯಮಾಪನದ ಭಾಗವಾಗಿ, ಯಾವುದೇ ರಾಜಕೀಯ ಉದ್ದೇಶವಿಲ್ಲದೆ ಕೈಗೊಳ್ಳಲಾಗಿದೆ ಎಂದು ಹೇಳುತ್ತಿವೆ.

error: Content is protected !!