ಹೊಸದಿಗಂತ ಡಿಜಿಟಲ್ ಡೆಸ್ಕ್;
ರಾಹುಲ್ ಗಾಂಧಿಯವರು ಚುನಾವಣಾ ಅಕ್ರಮದ ಹೇಳಿಕೆಯ ಮೂಲಕ ದೇಶ ಮತ್ತು ರಾಜ್ಯದ ಮತದಾರರಿಗೆ ಅವಮಾನ ಮಾಡಿದ್ದಾರೆ. ಅವರ ಹೇಳಿಕೆ ಮತ್ತು ಸಂವಿಧಾನ ವಿರೋಧಿ ನಡೆಯನ್ನು ಖಂಡಿಸಿ ಬಿಜೆಪಿ ವತಿಯಿಂದ ಆ. 5ರಂದು ಬೆಳಿಗ್ಗೆ 10 ಗಂಟೆಗೆ ವಿಧಾನಸೌಧದ ಗಾಂಧೀಜಿ ಅವರ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಹೇಳಿದ್ದಾರೆ.
ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿಯವರು ಇದೇ 5ರಂದು ಬೆಂಗಳೂರಿನಲ್ಲಿ ನಾಟಕ ಮಾಡಲು ಹೊರಟಿದ್ದಾರೆ ಎಂದು ದೂರಿದರು.
ರಾಹುಲ್ ಗಾಂಧಿಯವರು ಬರುತ್ತಾರೆಂಬ ಕಾರಣಕ್ಕೆ ರಾಜ್ಯ ಸರಕಾರವು ನಿನ್ನೆ ಫ್ರೀಡಂ ಪಾರ್ಕಿನಲ್ಲಿ ಕಾಂಪೌಂಡನ್ನು ಒಡೆದು ಹಾಕಿ ಅಲ್ಲಿದ್ದ ಮರವನ್ನೂ ಕಡಿದು ಹಾಕಿಸಿದೆ. ರಾಹುಲ್ ಗಾಂಧಿ, ಮುಖ್ಯಮಂತ್ರಿಗಳು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ರಾಹುಲ್ ಗಾಂಧಿ ಅವರು ಗೊಂದಲದಲ್ಲಿದ್ದಾರೆ. ಸೋಲಿನ ಅವಮಾನ ಮತ್ತು ಹತಾಶರಾಗಿ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ. ಈ ದೇಶದ ಜನರ ವಿಶ್ವಾಸವನ್ನು ಪಡೆದುಕೊಳ್ಳುವಲ್ಲಿ ವಿಫಲರಾದ ರಾಹುಲ್ ಗಾಂಧಿಯವರು ಒಂದು ಕಪಟ ನಾಟಕವನ್ನು ಪ್ರಾರಂಭ ಮಾಡಿದ್ದಾರೆ ಎಂದು ವಿಜಯೇಂದ್ರ ಅವರು ಆಕ್ಷೇಪಿಸಿದರು.
ಚುನಾವಣೆಗಳಲ್ಲಿ ಅಕ್ರಮ ನಡೆದಿರುವುದಕ್ಕೆ ನನ್ನ ಬಳಿ 100 ಪ್ರತಿಶತ ಪುರಾವೆ ಇದೆ ಎಂದು ರಾಹುಲ್ ಗಾಂಧಿ ಅವರ ಹೇಳಿಕೆ ನೀಡಿದ್ದಾರೆ. ರಾಹುಲ್ ಗಾಂಧಿ ಮತ್ತು ಅವರ ಹೇಳಿಕೆಗೆ ಧ್ವನಿಗೂಡಿಸಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಳಿ ಚುನಾವಣೆಯಲ್ಲಿ ಅಕ್ರಮವಾಗಿರುವ ಬಗ್ಗೆ ಮತ್ತು ಚುನಾವಣಾ ಆಯೋಗದಲ್ಲಿ ದುರ್ಬಳಕೆ ಆಗಿದೆ ಎನ್ನುವ ಮಾಹಿತಿ ಅಥವಾ ಪುರಾವೆ ಇದ್ದರೆ. ಅದನ್ನು ರಾಜ್ಯ ಹೈಕೋರ್ಟಿಗೆ ಅಥವಾ ಸುಪ್ರೀಂ ಕೋರ್ಟಿಗೆ ಪುರಾವೆಗಳನ್ನು ನೀಡಿ ಪ್ರಶ್ನಿಸಬಹುದಾಗಿತ್ತು ಎಂದು ಆಕ್ಷೇಪಿಸಿದರು.
ಇಂದು ದೇಶದಲ್ಲಿ ಮತ್ತು ರಾಜ್ಯದಲ್ಲಿ ಗೊಂದಲವನ್ನು ಸೃಷ್ಟಿ ಮಾಡುವುದು, ಚುನಾವಣಾ ಆಯೋಗದ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಅವರು ಪ್ರಜಾಪ್ರಭುತ್ವದ ವ್ಯವಸ್ಥೆಯ ಮೇಲೆ ವಿಶ್ವಾಸ ಕಳೆದುಕೊಂಡಂತೆ ಕಾಣುತ್ತಿದೆ ಎಂದು ಟೀಕಿಸಿದರು. ರಾಹುಲ್ ಗಾಂಧಿ ಅವರು ಬಹಳ ಹತಾಶರಾಗಿದ್ದಾರೆ. 2014, 2019 ಮತ್ತು 2024 ರ ಲೋಕಸಭಾ ಚುನಾವಣೆಯ ಸತತ ಸೋಲುಗಳಿಂದ ಹತಾಶರಾಗಿರುವ ರಾಹುಲ್ ಗಾಂಧಿ ಅವರು, ತಮ್ಮ ನಾಯಕತ್ವದ ಬಗ್ಗೆ ವಿಶ್ವಾಸ ಕಳೆದುಕೊಂಡಂತೆ ಕಾಣುತ್ತಿದೆ ಎಂದು ವ್ಯಂಗ್ಯವಾಡಿದರು.