ಹೊಸದಿಗಂತ ಡಿಜಿಟಲ್ ಡೆಸ್ಕ್:
2025ರ ರಾಹುಗ್ರಸ್ತ ರಕ್ತ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಇಂದು ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ನಿತ್ಯ ನಡೆಯುವ ಪೂಜೆ ಮತ್ತು ಉತ್ಸವಗಳಲ್ಲಿ ತಾತ್ಕಾಲಿಕ ಬದಲಾವಣೆಗಳನ್ನು ಮಾಡಲಾಗಿದೆ. ಭಕ್ತರ ಭದ್ರತೆ ಮತ್ತು ಧಾರ್ಮಿಕ ಸಂಪ್ರದಾಯದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಮಠದ ಆಡಳಿತ ಮಂಡಳಿಯ ಮಾಹಿತಿ ಪ್ರಕಾರ, ಮಧ್ಯಾಹ್ನ 12:30ರೊಳಗೆ ಎಲ್ಲಾ ನಿತ್ಯ ಪೂಜೆ, ಸಂಸ್ಥಾನ ಪೂಜೆ, ಪಾದ ಪೂಜೆ ಹಾಗೂ ಪ್ರಸಾದ ವಿತರಣೆ ಮುಗಿಯಲಿದೆ. ಆ ನಂತರದಿಂದ ತೀರ್ಥ-ಪ್ರಸಾದ ವ್ಯವಸ್ಥೆ ಸ್ಥಗಿತವಾಗಲಿದೆ. ಆದಾಗ್ಯೂ, ಭಕ್ತರಿಗೆ ಎಂದಿನಂತೆ ಶ್ರೀ ರಾಯರ ವೃಂದಾವನ ದರ್ಶನಕ್ಕೆ ಅವಕಾಶವಿರಲಿದೆ. ಸಾಮಾನ್ಯವಾಗಿ ರಾತ್ರಿ ನಡೆಯುವ ಸೇವೆಗಳು ಹಾಗೂ ಉತ್ಸವಗಳನ್ನು ಹಗಲಿನಲ್ಲಿಯೇ ನಡೆಸಲಾಗುತ್ತಿದೆ.
ಇಂದು ಬೆಳಿಗ್ಗೆಯಿಂದಲೇ ರಥೋತ್ಸವ, ಪಲ್ಲಕ್ಕಿ ಸೇವೆ ಹಾಗೂ ತೊಟ್ಟಿಲು ಸೇವೆಗಳಂತಹ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾಗಿವೆ. ಆದರೆ ಗ್ರಹಣ ಪ್ರಾರಂಭವಾದ ಬಳಿಕ, ಮಠದ ಆವರಣದಲ್ಲಿ ಗ್ರಹಣ ಶಾಂತಿ ಹೋಮವನ್ನು ನೆರವೇರಿಸಲಾಗುವುದು. ಗ್ರಹಣ ಮುಗಿದ ನಂತರ ಶ್ರೀ ರಾಯರ ವೃಂದಾವನದಲ್ಲಿ ಜಲಾಭಿಷೇಕದ ವಿಶೇಷ ಕಾರ್ಯಕ್ರಮ ಜರುಗಲಿದೆ.