ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿಕೆಟ್ ಪಡೆಯದೇ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನಿಗೆ ಕಂಡಕ್ಟರ್ ಕಪಾಳಮೋಕ್ಷ ಮಾಡಿದ ವಿಡಿಯೋ ವೈರಲ್ ಆಗಿದೆ.
ಬಿಎಂಟಿಸಿ ಬಸ್ನಲ್ಲಿ ದೇವನಹಳ್ಳಿಯಿಂದ ಮೆಜೆಸ್ಟಿಕ್‌ಗೆ ಈಶಾನ್ಯ ಭಾರತದ ಮೂಲದ ಯುವಕ ಟಿಕೆಟ್ ಪಡೆಯದೇ ಪ್ರಯಾಣಿಸುತ್ತಿದ್ದನು. ಇನ್ನು ಟಿಕೆಟ್ ತಪಾಸಣೆ ತಂಡ ಬಸ್ ನಿಲ್ಲಿಸಿ ಪ್ರಯಾಣಿಕರ ಟಿಕೆಟ್ ಪರಿಶೀಲಿಸಿದ್ದಾರೆ. ಆಗ ಯುವಕ ಸಿಕ್ಕಿಬಿದ್ದಿದ್ದು 420 ರೂಪಾಯಿ ದಂಡ ಸಹ ಕಟ್ಟಿದ್ದಾನೆ. ಇನ್ನು ಟಿಕೆಟ್ ಕೊಡದಿದ್ದಕ್ಕೆ ಬಸ್ ಕಂಡೆಕ್ಟರ್ ಗೂ ದಂಡ ವಿಧಿಸಿದ್ದಾರೆ. ಇದರಿಂದ ಕೋಪಗೊಂಡ ಕಂಡಕ್ಟರ್ ಪ್ರಯಾಣಿಕನಿಗೆ ಕಪಾಳಮೋಕ್ಷ ಮಾಡಿದ್ದಾನೆ.
ಈ ವಿಡಿಯೋ ಅಪ್ಲೋಡ್ ಮಾಡಿರುವ ಪ್ರಯಾಣಿಕ ಕಂಡಕ್ಟರ್ ಬಳಿ ಹೋಗಿ ನಾನೇ ಟಿಕೆಟ್ ಖರೀದಿಸಬೇಕು ಎಂದು ತಿಳಿದಿರಲಿಲ್ಲ. ಕಂಡೆಕ್ಟರ್ ಬರುತ್ತಾರೆ ಎಂದು ಕಾಯುತ್ತಿದೆ. ಅಷ್ಟರಲ್ಲೇ ತಪಾಸನೆ ತಂಡ ಬಸ್ ಗೆ ಕೈಹಾಕಿತ್ತು ಎಂದು ಬರೆದುಕೊಂಡಿದ್ದಾರೆ. ಈ ಸಂಬಂಧ ದೂರು ದಾಖಲಾಗಿದೆ ಎಂದು ಬಿಎಂಟಿಸಿ ಹೇಳಿದೆ. ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ವಿವಾದವನ್ನು ಹುಟ್ಟುಹಾಕಿದ್ದು ಪ್ರಯಾಣಿಕರು ದಾಳಿಯನ್ನು ಖಂಡಿಸಿದ್ದಾರೆ. ಅಲ್ಲದೆ ಕಂಡಕ್ಟರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.