Thursday, January 1, 2026

ನ್ಯೂ ಇಯರ್ ಪಾರ್ಟಿಗೆ ಬಿಎಂಟಿಸಿ ಸಾಥ್; ಖಜಾನೆಗೆ ಹರಿದುಬಂತು ಲಕ್ಷಾಂತರ ಹಣ!

ಹೊಸದಿಗಂತ ಡಿಜಿಟಲ್ ಡೆಸ್ಕ್:

2026ರ ಹೊಸ ವರ್ಷವನ್ನು ಸ್ವಾಗತಿಸಲು ಇಡೀ ಸಿಲಿಕಾನ್ ಸಿಟಿ ರಸ್ತೆಗಿಳಿದಿತ್ತು. ಈ ಸಂಭ್ರಮಾಚರಣೆಗೆ ಬಿಎಂಟಿಸಿ ನೀಡಿದ ಹೆಚ್ಚುವರಿ ಸಾಥ್ ಸಂಸ್ಥೆಗೆ ಭಾರಿ ಲಾಭ ತಂದುಕೊಟ್ಟಿದೆ. ಡಿಸೆಂಬರ್ 31ರ ರಾತ್ರಿ ಕೇವಲ ನಾಲ್ಕು ಗಂಟೆಗಳ ವಿಶೇಷ ಸೇವೆಯಿಂದ ಬಿಎಂಟಿಸಿ ಬರೋಬ್ಬರಿ 10 ಲಕ್ಷ ರೂಪಾಯಿ ಆದಾಯ ಗಳಿಸಿದೆ.

ಹೊಸ ವರ್ಷದ ಮುನ್ನಾದಿನ ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 3 ಗಂಟೆಯವರೆಗೆ ವಿಶೇಷ ಬಸ್ ಸೇವೆಗಳನ್ನು ಒದಗಿಸಲಾಗಿತ್ತು. ಈ ಕುರಿತು ಬಿಎಂಟಿಸಿ ಚೀಫ್ ಟ್ರಾಫಿಕ್ ಮ್ಯಾನೇಜರ್ ಪ್ರಭಾಕರ್ ರೆಡ್ಡಿ ಮಾಹಿತಿ ನೀಡಿದ್ದಾರೆ.

ರಾತ್ರಿ ಸಮಯದಲ್ಲಿ ಒಟ್ಟು 200 ಟ್ರಿಪ್‌ಗಳನ್ನು ಮಾಡಲಾಗಿದ್ದು, ಬಸ್‌ಗಳು 4,400 ಕಿ.ಮೀ ದೂರ ಕ್ರಮಿಸಿವೆ. ಒಂದೇ ರಾತ್ರಿ ಸರಿಸುಮಾರು 1 ಲಕ್ಷಕ್ಕೂ ಅಧಿಕ ಜನರು ಬಿಎಂಟಿಸಿ ಸೇವೆಯನ್ನು ಬಳಸಿಕೊಂಡಿದ್ದಾರೆ.

ಎಂಜಿ ರಸ್ತೆ, ಇಂದಿರಾನಗರ, ಕೋರಮಂಗಲ ಹಾಗೂ ಮಾಲ್ ಆಫ್ ಏಷ್ಯಾದಂತಹ ಹಾಟ್‌ಸ್ಪಾಟ್‌ಗಳಿಗೆ ಹೆಚ್ಚಿನ ಆದಾಯ ಹರಿದುಬಂದಿದೆ.

ಡಿಸೆಂಬರ್ 24ರಿಂದ ಐಟಿ-ಬಿಟಿ ಉದ್ಯೋಗಿಗಳು ರಜೆಯಲ್ಲಿದ್ದ ಕಾರಣ ಬಸ್‌ಗಳ ಆದಾಯದಲ್ಲಿ ಕುಸಿತ ಕಂಡುಬಂದಿತ್ತು. ಡಿಸೆಂಬರ್ 25 ರಿಂದ 28ರ ಅವಧಿಯಲ್ಲಿ ದಿನಕ್ಕೆ ಸುಮಾರು 60 ಲಕ್ಷ ರೂ.ಗಳಷ್ಟು ಆದಾಯ ಇಳಿಕೆಯಾಗಿತ್ತು. ಆದರೆ, ಹೊಸ ವರ್ಷದ ಸ್ವಾಗತಕ್ಕಾಗಿ ಬುಧವಾರ ಒಂದೇ ದಿನ ಲಕ್ಷಾಂತರ ಜನರು ರಸ್ತೆಗಿಳಿದಿದ್ದರಿಂದ ಸಂಸ್ಥೆಯ ಆದಾಯ ಮತ್ತೆ ಏರಿಕೆಯ ಹಾದಿಗೆ ಮರಳಿದೆ.

ಒಟ್ಟಾರೆಯಾಗಿ, ಜನವರಿ 1ರ ಸಂಭ್ರಮವು ಬಿಎಂಟಿಸಿಯ ಪಾಲಿಗೆ ಹೊಸ ವರ್ಷದ ಮೊದಲ ದಿನವೇ ಸಿಹಿಸುದ್ದಿ ಹೊತ್ತು ತಂದಿದೆ.

error: Content is protected !!