ಇತ್ತೀಚಿನ ದಿನಗಳಲ್ಲಿ ಜನರು ವೈಯಕ್ತಿಕ ನೈರ್ಮಲ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಯುವ ಪೀಳಿಗೆ ಮಾತ್ರವಲ್ಲದೆ ಎಲ್ಲರೂ ಸ್ವಚ್ಛ ಮತ್ತು ಅಚ್ಚುಕಟ್ಟಾಗಿ ಕಾಣಲು ಬಯಸುತ್ತಾರೆ. ದೇಹದ ಗೋಚರಿಸುವ ಭಾಗಗಳಷ್ಟೇ ಅಲ್ಲದೆ, ಖಾಸಗಿ ಭಾಗಗಳ ಸ್ವಚ್ಛತೆಯೂ ಅತ್ಯಂತ ಮುಖ್ಯವಾಗಿದೆ. ಕಂಕುಳ ಮತ್ತು ತೊಡೆಸಂದುಗಳಂತಹ ಭಾಗಗಳಲ್ಲಿ ಬೆಳೆಯುವ ಪ್ಯುಬಿಕ್ ಕೂದಲನ್ನು ಹೇಗೆ ನಿರ್ವಹಿಸಬೇಕು ಎಂಬುದು ಬಹಳ ಮಂದಿಗೆ ಗೊಂದಲದ ವಿಷಯವಾಗಿದೆ.
ಯಾವಾಗ ತೆಗೆಯಬೇಕು?
ಪ್ಯುಬಿಕ್ ಕೂದಲನ್ನು ತೆಗೆಯಲು ನಿಗದಿತ ಸಮಯವಿಲ್ಲ. ಕೆಲವರು ವಾರಕ್ಕೊಮ್ಮೆ ಸ್ವಚ್ಛಗೊಳಿಸುತ್ತಾರೆ, ಇನ್ನೂ ಕೆಲವರು ತಿಂಗಳಿಗೆ ಒಮ್ಮೆ ಮಾತ್ರ ಮಾಡುತ್ತಾರೆ. ಆದಾಗ್ಯೂ, ಹೆಚ್ಚು ಹೆಚ್ಚು ಶೇವ್ ಅಥವಾ ವ್ಯಾಕ್ಸಿಂಗ್ ಮಾಡಿದರೆ ಚರ್ಮದಲ್ಲಿ ಕಿರಿಕಿರಿ, ಕಡಿತ ಅಥವಾ ಸೋಂಕಿನ ಅಪಾಯ ಹೆಚ್ಚಾಗಬಹುದು. ನಿಮ್ಮ ದೇಹದ ಅಗತ್ಯಕ್ಕೆ ಅನುಗುಣವಾಗಿ ಸಮಯ ನಿಗದಿಪಡಿಸಿಕೊಳ್ಳುವುದು ಉತ್ತಮ.
ಪ್ಯುಬಿಕ್ ಕೂದಲನ್ನು ತೆಗೆಯುವ ವಿಧಾನಗಳು
ವ್ಯಾಕ್ಸಿಂಗ್ : ಕೂದಲನ್ನು ಬೇರುಸಹಿತ ತೆಗೆಯುವ ಕಾರಣದಿಂದ ಮತ್ತೆ ಬೆಳೆಯಲು ಹೆಚ್ಚು ಸಮಯ ಹಿಡಿಯುತ್ತದೆ. ಆದರೆ ನೋವು ಹೆಚ್ಚಿರುತ್ತದೆ.
ಕ್ರೀಮ್ ಬಳಕೆ : ನೋವುರಹಿತ ವಿಧಾನ, ಆದರೆ ಕೆಲವರಿಗೆ ಅಲರ್ಜಿ ಉಂಟಾಗಬಹುದು. ಪ್ಯಾಚ್ ಟೆಸ್ಟ್ ಮಾಡುವುದು ಅಗತ್ಯ.
ಶೇವಿಂಗ್ : ಸುಲಭ ವಿಧಾನ, ಆದರೆ ಮತ್ತೆ ಬೇಗ ಬೆಳೆಯುತ್ತದೆ. ಶೇವ್ ಮಾಡಿದ ನಂತರ ಹಿತವಾದ ಲೋಷನ್ ಬಳಕೆ ಮುಖ್ಯ.
ಪ್ಯುಬಿಕ್ ಕೂದಲನ್ನು ತೆಗೆದುಹಾಕುವುದು ಸಂಪೂರ್ಣವಾಗಿ ವೈಯಕ್ತಿಕ ತೀರ್ಮಾನ. ಯಾವ ವಿಧಾನವನ್ನು ಆಯ್ಕೆ ಮಾಡಿದರೂ ಚರ್ಮದ ಸುರಕ್ಷತೆ ಮತ್ತು ಆರೈಕೆಗೆ ಆದ್ಯತೆ ನೀಡಬೇಕು. ಅತಿಯಾಗಿ ತೆಗೆಯುವ ಬದಲು, ದೇಹದ ಆರಾಮ ಮತ್ತು ಸ್ವಚ್ಛತೆಯನ್ನು ಗಮನಿಸಿ ಕ್ರಮ ತೆಗೆದುಕೊಳ್ಳುವುದು ಆರೋಗ್ಯಕರ.