ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರಿನ ಉದ್ಯಮಿ, ಕಂಬಳ ಸಂಘಟಕ, ವಾಮಂಜೂರು ತಿರುವೈಲುಗುತ್ತು ನವೀನ್ ಚಂದ್ರ ಆಳ್ವ ಅವರ ಪುತ್ರ ಅಭಿಷೇಕ್ ಆಳ್ವ ಅವರ ಮೃತದೇಹ ಇಂದು ಮುಲ್ಕಿ ಸಮೀಪದ ಬಪ್ಪನಾಡು ಸೇತುವೆ ಬಳಿ ಪತ್ತೆಯಾಗಿದೆ.
ಇವರು ಶಾಂಭವಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.

ಅಭಿಷೇಕ್, ರಾತ್ರಿಯಾದರೂ ಮಗ ಮನೆಗೆ ಬಾರದ ಕಾರಣ ನವೀನ್ ಚಂದ್ರ ಆಳ್ವ ಪಡುಬಿದ್ರೆ ಠಾಣೆಗೆ ದೂರು ನೀಡಿದ್ದರು. ಈ ನಡುವೆ ಬಪ್ಪನಾಡು ಬಳಿಯ ಸೇತುವೆ ಬಳಿ ಅವರ ಕಾರು ಪತ್ತೆಯಾಗಿದ್ದು, ತಕ್ಷಣವೇ ಶೋಧ ಕಾರ್ಯ ನಡೆಸಲಾಗಿತ್ತು. ರಾತ್ರಿಯಿಡೀ ಹುಡುಕಾಟ ನಡೆಸಿದರೂ ಅವರು ಪತ್ತೆಯಾಗಿರಲಿಲ್ಲ. ಇಂದು ಮುಂಜಾನೆ ಚಂದ್ರ ಶಾನುಭಾಗರ ಕುದ್ರು ಬಳಿ ಮೃತದೇಹ ಪತ್ತೆಯಾಗಿದೆ.
ಸದ್ಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

