ಹೊಸದಿಗಂತ ಡಿಜಿಟಲ್ ಡೆಸ್ಕ್:
’96’ ಸಿನಿಮಾ ಖ್ಯಾತಿಯ ಯುವ ನಟಿ ಗೌರಿ ಕಿಶನ್ ಅವರು ಇತ್ತೀಚೆಗೆ ತಮ್ಮ ಮುಂಬರುವ ತಮಿಳು ಸಿನಿಮಾ ‘ಅದರ್ಸ್’ನ ಪತ್ರಿಕಾಗೋಷ್ಠಿಯಲ್ಲಿ ಎದುರಾದ ಮುಜುಗರದ ಸನ್ನಿವೇಶದಿಂದಾಗಿ ಸುದ್ದಿಯಲ್ಲಿದ್ದಾರೆ. ಒಬ್ಬ ಯೂಟ್ಯೂಬರ್ ಪತ್ರಕರ್ತನೆಂದು ಹೇಳಿಕೊಂಡು ನಟಿಗೆ ಅವರ ದೇಹದ ಕುರಿತು (ಬಾಡಿ ಶೇಮಿಂಗ್) ಅತ್ಯಂತ ಅಸಭ್ಯ ಪ್ರಶ್ನೆಯನ್ನು ಕೇಳಿ ಅವಮಾನ ಮಾಡಲು ಪ್ರಯತ್ನಿಸಿದ್ದ.
ಆದರೆ, ಗೌರಿ ಕಿಶನ್ ಅವರು ಈ ಸನ್ನಿವೇಶದಲ್ಲಿ ಎದೆಗುಂದದೆ, ಆ ಪ್ರಶ್ನೆ ಕೇಳಿದ ವ್ಯಕ್ತಿಯನ್ನು ವೇದಿಕೆಯಲ್ಲೇ ತರಾಟೆಗೆ ತೆಗೆದುಕೊಂಡರು. ಅವರ ಧೈರ್ಯ ಮತ್ತು ಖಡಕ್ ಉತ್ತರ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಪ್ರಶ್ನೆ ಕೇಳಿದ ಯೂಟ್ಯೂಬರ್ ಗೌರಿ ಅವರ ಮಾತಿಗೆ ಪ್ರತಿಯಾಗಿ ವಾದ ಮಾಡಿ, ಜೋರು ಮಾಡಿದ್ದರೂ ನಟಿ ಮಾತ್ರ ತಮ್ಮ ನಿಲುವಿನಲ್ಲಿ ಅಚಲರಾಗಿದ್ದರು.
ಇತ್ತೀಚೆಗೆ ನಕಲಿ ಪತ್ರಕರ್ತರು ಮತ್ತು ಕೆಲವು ಯೂಟ್ಯೂಬ್ ಚಾನೆಲ್‌ಗಳ ಹಾವಳಿಯಿಂದಾಗಿ ಸೆಲೆಬ್ರಿಟಿಗಳು, ವಿಶೇಷವಾಗಿ ನಟಿಯರು ಇಂತಹ ಮುಜುಗರದ ಸನ್ನಿವೇಶಗಳನ್ನು ಎದುರಿಸುವುದು ಸಾಮಾನ್ಯವಾಗಿದೆ. ಆದರೆ, ಗೌರಿ ಕಿಶನ್ ತೋರಿದ ದಿಟ್ಟತನಕ್ಕೆ ಇದೀಗ ತಮಿಳು ಚಿತ್ರರಂಗದ ಗಣ್ಯರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಹಿರಿಯ ನಟಿ ಖುಷ್ಬೂ, ನಿರ್ದೇಶಕ ಪಾ. ರಂಜಿತ್, ಗಾಯಕಿ ಚಿನ್ಮಯಿ ಶ್ರೀಪಾದ್, ಮತ್ತು ಸಂಗೀತ ನಿರ್ದೇಶಕ ಸಂತೋಷ್ ನಾರಾಯಣ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಗೌರಿ ಕಿಶನ್ ಅವರ ಬೆಂಬಲಕ್ಕೆ ನಿಂತು, ಆ ಯೂಟ್ಯೂಬರ್‌ನ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ನಟಿಯ ಈ ಧೈರ್ಯಕ್ಕೆ ಇಡೀ ಚಿತ್ರರಂಗವೇ ಪ್ರೋತ್ಸಾಹ ನೀಡಿದ್ದು, ವೃತ್ತಿಪರತೆಯ ಮರೆತು ಅಸಭ್ಯವಾಗಿ ವರ್ತಿಸಿದ ಪತ್ರಕರ್ತನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

