Saturday, October 11, 2025

ಬಾಲಿವುಡ್ ನಟ, ದೇಹದಾರ್ಢ್ಯ ಪಟು ವರೀಂದರ್ ಘುಮಾನ್ ಹೃದಯಾಘಾತಕ್ಕೆ ಬಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಮತ್ತು ಪಂಜಾಬಿ ಸಿನಿರಂಗದಲ್ಲಿ ಖ್ಯಾತಿ ಗಳಿಸಿದ್ದ ಅಂತಾರಾಷ್ಟ್ರೀಯ ದೇಹದಾರ್ಢ್ಯ ಪಟು ವರೀಂದರ್ ಘುಮಾನ್ ಹೃದಯಾಘಾತದಿಂದ ಅಕಾಲಿಕವಾಗಿ ನಿಧನರಾಗಿದ್ದಾರೆ.

ಬೈಸೆಪ್ಸ್ ಗಾಯದ ಹಿನ್ನೆಲೆಯಲ್ಲಿ ಸಣ್ಣ ಶಸ್ತ್ರಚಿಕಿತ್ಸೆಗೆ ಅಮೃತಸರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಅವರಿಗೆ ಹೃದಯಾಘಾತ ಉಂಟಾಗಿ ಮೃತ್ಯು ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಸುದ್ದಿ ಕೇಳಿ ಅವರ ಅಭಿಮಾನಿಗಳು ಮತ್ತು ಸಿನಿ ವಲಯದಲ್ಲಿ ಆಘಾತ ವ್ಯಕ್ತವಾಗಿದೆ.

42 ವರ್ಷದ ವರೀಂದರ್ ಘುಮಾನ್ 2023ರಲ್ಲಿ ಬಿಡುಗಡೆಯಾದ ಸಲ್ಮಾನ್ ಖಾನ್ ಅಭಿನಯದ ಟೈಗರ್ 3 ಸೇರಿದಂತೆ ಹಲವು ಬಾಲಿವುಡ್ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಸುಕ್ಜಿಂದರ್ ಸಿಂಗ್ ರಾಂಧವ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದು, “ವರೀಂದರ್ ಘುಮಾನ್ ಅವರ ಕಠಿಣ ಪರಿಶ್ರಮ, ಶಿಸ್ತು ಮತ್ತು ಸಾಮರ್ಥ್ಯದಿಂದ ಅವರು ಪಂಜಾಬ್‌ನ ಹೆಸರನ್ನು ವಿಶ್ವದ ಮಟ್ಟಕ್ಕೆ ಕರೆದುಕೊಂಡು ಹೋದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ,” ಎಂದು ಹೇಳಿದ್ದಾರೆ.

ವರೀಂದರ್ ಘುಮಾನ್ ಅವರು ದೇಹದಾರ್ಢ್ಯ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದರು. 2009ರಲ್ಲಿ ಮಿಸ್ಟರ್ ಇಂಡಿಯಾ ಪ್ರಶಸ್ತಿ ಗೆದ್ದ ಅವರು, ಮಿಸ್ಟರ್ ಏಷ್ಯಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದರು. ವಿಶ್ವದ ಮೊದಲ ಸಸ್ಯಾಹಾರಿ ವೃತ್ತಿಪರ ಬಾಡಿಬಿಲ್ಡರ್ ಎಂಬ ಖ್ಯಾತಿಯನ್ನು ಪಡೆದ ಅವರು IFBB ಪ್ರೊ ಕಾರ್ಡ್ ಪಡೆದ ಮೊದಲ ಭಾರತೀಯರಾಗಿದ್ದರು. ಅವರ ಸಾಧನೆಗಳು ಹಾಲಿವುಡ್ ದಂತಕಥೆ ಆರ್ನಾಲ್ಡ್ ಶ್ವಾರ್ಜಿನೆಗ್ಗರ್ ಅವರ ಗಮನ ಸೆಳೆದಿದ್ದು, ಏಷ್ಯಾದಲ್ಲಿ ಬ್ರಾಂಡ್ ರಾಯಭಾರಿಯಾಗಿ ಘುಮಾನ್ ಅವರನ್ನು ನೇಮಿಸಿದ್ದರು.

ವರೀಂದರ್ ಪಂಜಾಬಿ ಚಿತ್ರರಂಗದಲ್ಲಿಯೂ ಗಮನಾರ್ಹ ಪಾತ್ರ ವಹಿಸಿದ್ದರು. ಕಬಡ್ಡಿ ಒನ್ಸ್ ಮೋರ್, ರೋರ್: ಟೈಗರ್ಸ್ ಆಫ್ ದಿ ಸುಂದರ್ಬನ್ಸ್, ಮಾರ್ಜಾವಾನ್ ಮುಂತಾದ ಚಿತ್ರಗಳಲ್ಲಿ ಅವರ ಅಭಿನಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಸಾಮಾಜಿಕ ಮಾಧ್ಯಮಗಳಲ್ಲಿ ಫಿಟ್ನೆಸ್ ಕುರಿತು ಪ್ರೇರಣಾದಾಯಕ ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದ ಅವರು, ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದರು.

error: Content is protected !!