ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2025 ಮುಗಿದ ಬಳಿಕ ಈಗಾಗಲೇ ಫ್ರಾಂಚೈಸಿಗಳು ಮುಂದಿನ ಸೀಸನ್‌ಗಾಗಿ ಸಿದ್ಧತೆ ಪ್ರಾರಂಭಿಸಿವೆ. ಈ ನಡುವೆ ಪಂಜಾಬ್ ಕಿಂಗ್ಸ್ ತಂಡಕ್ಕೆ ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದ ಮಾಜಿ ಭಾರತೀಯ ಸ್ಪಿನ್ನರ್ ಸುನೀಲ್ ಜೋಶಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಕನ್ನಡಿಗನಾದ ಜೋಶಿ, ಶೀಘ್ರದಲ್ಲೇ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ ಕ್ರಿಕೆಟ್ ಅಕಾಡೆಮಿಯಲ್ಲಿ ಸ್ಪಿನ್ ಬೌಲಿಂಗ್ ಕೋಚ್ ಆಗಿ ಹೊಸ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
ಸುನೀಲ್ ಜೋಶಿ ಅವರು 1996 ರಿಂದ 2002ರವರೆಗೆ 15 ಟೆಸ್ಟ್ ಹಾಗೂ 69 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಆಟಗಾರರಾಗಿ ಹೆಸರು ಮಾಡಿದ್ದ ಜೋಶಿ, ನಂತರ ಕೋಚ್ ಆಗಿಯೂ ಸಾಕಷ್ಟು ಅನುಭವ ಪಡೆದುಕೊಂಡಿದ್ದಾರೆ. ಅವರು ದೇಶೀಯ ಕ್ರಿಕೆಟ್, ಅಂತಾರಾಷ್ಟ್ರೀಯ ತಂಡಗಳು ಹಾಗೂ ಐಪಿಎಲ್ ತಂಡಗಳಿಗೂ ಮಾರ್ಗದರ್ಶನ ನೀಡಿದ್ದಾರೆ. ಇದೇ ಅನುಭವದಿಂದ ಬಿಸಿಸಿಐ ಅಕಾಡೆಮಿಗೆ ಅವರನ್ನು ಆಯ್ಕೆ ಮಾಡಲಾಗಿದೆ.
ಐಪಿಎಲ್ 2023 ಆರಂಭಕ್ಕೂ ಮೊದಲು ಪಂಜಾಬ್ ಕಿಂಗ್ಸ್ ತಂಡದಲ್ಲಿ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರ ನೇತೃತ್ವದಲ್ಲಿ ಜೋಶಿ ಸೇರಿಕೊಂಡಿದ್ದರು. ಕಳೆದ ಕೆಲವು ವರ್ಷಗಳಿಂದ ಅವರು ಫ್ರಾಂಚೈಸಿ ತಂಡಕ್ಕೆ ಸೇವೆ ಸಲ್ಲಿಸುತ್ತಿದ್ದರು. ಆದರೆ ಬಿಸಿಸಿಐ ಅಕಾಡೆಮಿಯ ಹೊಸ ಅವಕಾಶದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದಾರೆ.
ಜೋಶಿ ಅವರನ್ನು ನೂಶಿನ್ ಅಲ್ ಖದೀರ್, ರಾಕೇಶ್ ಧ್ರುವ್, ಪ್ರೀತಮ್ ಗಂಧೆ ಹಾಗೂ ಸೌರಶಿಶ್ ಲಹಿರಿ ಅವರಂತಹ ಹಲವು ಸ್ಪಿನ್ ತಜ್ಞರನ್ನು ಹಿಂದಿಕ್ಕಿ ಆಯ್ಕೆ ಮಾಡಲಾಗಿದೆ. ಇದು ಅವರ ದೀರ್ಘಕಾಲದ ಸಾಧನೆ ಮತ್ತು ಪರಿಣತಿಗೆ ದೊರೆತ ಗುರುತಾಗಿದೆ.