ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಣ್ಣಾಮುಚ್ಚಾಲೆ ಆಟವಾಡುವಾಗ ಕಾಣೆಯಾಗಿದ್ದ ಬಾಲಕ ಐದು ದಿನಗಳ ಬಳಿಕ ಕಟ್ಟಡದ ನೀರಿನ ಟ್ಯಾಂಕ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಈ ಘಟನೆ ಪಾಲ್ಘಡದಲ್ಲಿ ನಡೆದಿದೆ. ಎಂಟು ವರ್ಷದ ಬಾಲಕ ತನ್ನ ವಸತಿ ಕಟ್ಟಡದ ನೀರಿನ ಟ್ಯಾಂಕ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಆಟವಾಡುವಾಗ ಅಡಗಿಕೊಳ್ಳಲೆಂದು ಅಲ್ಲಿ ಕುಳಿತಿದ್ದನೋ, ಆಯತಪ್ಪಿ ಕೆಳಗೆ ಬಿದ್ದನೋ ಅಥವಾ ಕೊಲೆಯೋ ಎಂಬುದರ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೃತ ಬಾಲಕನನ್ನು ಮೆಹ್ರಾಜ್ ಶೇಖ್ ಎಂದು ಗುರುತಿಸಲಾಗಿದೆ.
ಬಾಲಕ ತನ್ನ ಹೆತ್ತವರೊಂದಿಗೆ ನಲಸೋಪರಾ ಪಶ್ಚಿಮದ ಟಕಿಪಾಡಾ ಪ್ರದೇಶದ ಕರಾರಿ ಬಾಗ್ ಕಟ್ಟಡದಲ್ಲಿ ವಾಸವಾಗಿದ್ದ. ಡಿಸೆಂಬರ್ 3 ರಂದು ಶಾಲೆಯಿಂದ ಹಿಂದಿರುಗಿದ ನಂತರ ಆಟವಾಡಲು ಹೊರಗೆ ಹೋಗಿದ್ದ ಆದರೆ ಮನೆಗೆ ಹಿಂತಿರುಗಲಿಲ್ಲ. ಎಲ್ಲೆಡೆ ಹುಡುಕಿದ ನಂತರ, ಅವನ ಪೋಷಕರು ಡಿಸೆಂಬರ್ 4 ರಂದು ನಲಸೋಪರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ನಲಸೋಪರಾ ಪೊಲೀಸರು ಅಪಹರಣ ಪ್ರಕರಣ ದಾಖಲಿಸಿದ್ದರು.
ಸೋಮವಾರ ಬೆಳಗ್ಗೆ, ಕಟ್ಟಡದ ನೀರಿನ ಟ್ಯಾಂಕ್‌ನಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ನಿವಾಸಿಗಳು ದೂರು ನೀಡಿದ್ದರು. ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಯಿತು. ನೀರಿನ ಟ್ಯಾಂಕ್‌ನಲ್ಲಿ ಹುಡುಕಿದಾಗ, ಕಾಣೆಯಾದ ಬಾಲಕನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ನೀರಿನ ಟ್ಯಾಂಕ್ ತೆರೆದಿತ್ತು ಮತ್ತು ಮೆಹ್ರಾಜ್ ಅದರೊಳಗೆ ಬಿದ್ದಿರಬಹುದು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

