ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಕರ ಆಟದ ವೇಳೆ ಏರ್ ಗನ್ ಗುಂಡು ಹಾರಿ 9 ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸೋಮನಳ್ಳಿಯಲ್ಲಿ ನಡೆದಿದೆ.
ಸೋಮನಳ್ಳಿಯ ರಾಘವೇಂದ್ರ ಕೇಶವ ಹೆಗಡೆ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಬಸಪ್ಪ ಉಂಡಿಯರ್ ಅವರ ಪುತ್ರ ಕರಿಯಪ್ಪ (9) ಎಂಬ ಬಾಲಕ ದುರ್ಘಟನೆಗೆ ಬಲಿಯಾಗಿದ್ದಾನೆ. ರಾಘವೇಂದ್ರ ಹೆಗಡೆ ಅವರ ತಮ್ಮ ಗಣಪತಿ ಹೆಗಡೆ ಅವರ ಮನೆಯಂಗಳದಲ್ಲಿ ಈ ಘಟನೆ ನಡೆದಿದೆ.
ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಏರ್ ಗನ್ ಗುಂಡು ಹೊಡೆದಿದ್ದರಿಂದ ಬಾಲಕ ಮೃತಪಟ್ಟಿದ್ದಾನೆ. ಕರಿಯಪ್ಪ ಅವರ 7 ವರ್ಷದ ತಮ್ಮ ಆಕಸ್ಮಿಕವಾಗಿ ಏರ್ ಗನ್ ಗುಂಡು ಹಾರಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆಟವಾಡಲು ಹೋಗಿ ಪ್ರಾಣ ಕಳೆದುಕೊಂಡ ಬಾಲಕನ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್, ಡಿಎಸ್ಪಿ ಗೀತಾ ಪಾಟೀಲ್, ಸಿಪಿಐ ಶಶಿಕಾಂತ ವರ್ಮಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ನಿತೀಷ್ ಎಂಬವನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿದಿದೆ.
ಆಟವಾಡುವಾಗ ಏರ್‌ಗನ್ ಗುಂಡು ಹಾರಿ ತಮ್ಮನಿಂದಲೇ ಅಣ್ಣ ಸಾವು!
