Tuesday, December 30, 2025

ಬಸ್-ಬೈಕ್ ಮುಖಾಮುಖಿ ಡಿಕ್ಕಿ; ತಂದೆ-ಮಗು ದುರ್ಮರಣ, ಮತ್ತೊಂದು ಮಗುವಿನ ಸ್ಥಿತಿ ಗಂಭೀರ

ಹೊಸದಿಗಂತ ಹುಬ್ಬಳ್ಳಿ:

ಇಲ್ಲಿನ ಕಾರವಾರ ರಸ್ತೆಯ ಅಂಚಟಗೇರಿ ಬಳಿ ಇಂದು ಬೆಳಿಗ್ಗೆ ನಡೆದ ಭೀಕರ ರಸ್ತೆ ಅಪಘಾತವೊಂದು ತಂದೆ ಮತ್ತು ಕಂದಮ್ಮನ ಜೀವವನ್ನು ಬಲಿಪಡೆದಿದೆ. ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಈ ಡಿಕ್ಕಿಯಲ್ಲಿ ತಂದೆ ಮತ್ತು ಎರಡು ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಂದು ಮಗು ಸಾವು-ಬದುಕಿನ ನಡುವೆ ಹೋರಾಡುತ್ತಿದೆ.

ಶಿಗ್ಗಾಂವಿ ತಾಲ್ಲೂಕಿನ ತಡಸ ಗ್ರಾಮದ ನಿವಾಸಿ ಮೆಹಬೂಬ ಖಾನ್ ಉಸ್ತಾದಿ (36) ಹಾಗೂ ಅವರ ಎರಡು ವರ್ಷದ ಮಗು ಅಸ್ನೇನ್ ಮೃತ ದುರ್ದೈವಿಗಳು. ಮೆಹಬೂಬ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಹುಬ್ಬಳ್ಳಿಯಿಂದ ತಡಸಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದರು. ಅಂಚಟಗೇರಿ ಬಳಿ ಮುಂದಿದ್ದ ವಾಹನವನ್ನು ಓವರ್‌ಟೇಕ್ ಮಾಡಲು ಪ್ರಯತ್ನಿಸಿದಾಗ, ಎದುರಿನಿಂದ ವೇಗವಾಗಿ ಬಂದ ಸಾರಿಗೆ ಬಸ್‌ಗೆ ಬೈಕ್ ನೇರವಾಗಿ ಡಿಕ್ಕಿ ಹೊಡೆದಿದೆ.

ಈ ಅಪಘಾತದಲ್ಲಿ ನಾಲ್ಕು ವರ್ಷದ ಹೆಣ್ಣು ಮಗು ಅಜೀಜಾ ತೀವ್ರವಾಗಿ ಗಾಯಗೊಂಡಿದ್ದು, ಕೂಡಲೇ ಆಕೆಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅತಿಯಾದ ವೇಗ ಮತ್ತು ಅಜಾಗರೂಕತೆಯ ಓವರ್‌ಟೇಕ್ ಈ ದುರಂತಕ್ಕೆ ಕಾರಣವೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

error: Content is protected !!