ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದ ಹೊರ ವರ್ತುಲ ರಸ್ತೆಯಲ್ಲಿ ಮಂಗಳವಾರ ಸಂಜೆ ಬಿಎಂಟಿಸಿ ಬಸ್ ಕೆಟ್ಟು ನಿಂತ ಪರಿಣಾಮ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಯಿತು.
ಇಕೋ ಸ್ಪೇಸ್ ಜಂಕ್ಷನ್ ಬಳಿ ರಸ್ತೆಯ ಮಧ್ಯದಲ್ಲೇ ತಾಂತ್ರಿಕ ಸಮಸ್ಯೆಯಿಂದಾಗಿ ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್ ಸಂಚಾರ ಸ್ಥಗಿತವಾಯಿತು. ಬಸ್ ಚಾಲನೆಗೊಳಿಸಲು ಪ್ರಯತ್ನಿಸಿದರೂ ಸಾಧ್ಯವಾಗದ ಕಾರಣ ಸಂಚಾರ ದಟ್ಟಣೆ ಅಧಿಕವಾಯಿತು.
ಮಾಹಿತಿ ತಿಳಿದು ಸಂಚಾರ ಪೊಲೀಸರು ಸ್ಥಳಕ್ಕೆ ಧಾವಿಸಿದರೂ ಪ್ರಯೋಜನವಾಗಲಿಲ್ಲ. ಎಕ್ಸ್‌ನಲ್ಲಿ ಸಂದೇಶ ಹಾಕಿದ ಸಂಚಾರ ಪೊಲೀಸರು, ಇಕೋ ಸ್ಪೇಸ್ ಜಂಕ್ಷನ್ ಬಳಿ ವಾಹನ ಕೆಟ್ಟು ನಿಂತಿರುವುದರಿಂದ ಮಾರತ್‌ಹಳ್ಳಿ, ಕಾಡುಬೀಸನಹಳ್ಳಿ, ದೇವರಬೀಸನಹಳ್ಳಿ, ಬೆಳ್ಳಂದೂರು ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ ಎನ್ನುವ ಸೂಚನೆ ನೀಡಿದರು.
ಇದಾದ ಎರಡು ಗಂಟೆವರೆಗೆ ವಾಹನ ಸಂಚಾರ ವ್ಯತ್ಯಯಗೊಂಡು ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಬೈಕ್ ಸವಾರರು ಕಷ್ಟಪಟ್ಟುಕೊಂಡು ತೆರಳಿದರೆ, ಕಾರು, ಬಸ್, ಲಾರಿ ಸಹಿತ ಇತರೆ ವಾಹನ ಸವಾರರು ಪರದಾಡಬೇಕಾಯಿತು.