ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ-2 ಹಾಗೂ ಜಲಾನಯನ ಕೃಷಿ ಅಭಿವೃದ್ಧಿ ಘಟಕದ ಸಹಯೋಗದಲ್ಲಿ ರಾಜ್ಯದ 15 ಜಿಲ್ಲೆಗಳಲ್ಲಿ ಹೆಚ್ಚುವರಿಯಾಗಿ 15 ಯೋಜನೆಗಳನ್ನು ಜಾರಿಗೊಳಿಸಲು ಸಚಿವ ಸಂಪುಟ ತೀರ್ಮಾನಿಸಿದೆ ಎಂದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ .ಪಾಟೀಲ್ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷೆತೆಯಲ್ಲಿ ನಡೆದ ಸಚಿವ ಸಂಪುಟದ ಸಭೆಯ ನಂತರ ಅವರು, 15 ತಾಲೂಕುಗಳಲ್ಲಿನ 39 ಸಾವಿರದ 413 ಹೆಕ್ಟೇರ್ ಪ್ರದೇಶದಲ್ಲಿ 90 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆಗಳನ್ನು ಜಾರಿಗೊಳಿಸಲು ಸಂಪುಟ ಅನುಮೋದನೆ ನೀಡಿದೆ ಎಂದರು.
2025-26ನೇ ಸಾಲಿಗೆ ರಸಗೊಬ್ಬರ ದಾಸ್ತಾನು ಮಾಡುವ ಉದ್ದೇಶಕ್ಕಾಗಿ ಕರ್ನಾಟಕ ರಾಜ್ಯ ಬೀಜ ನಿಗಮ ಹಾಗೂ ಕರ್ನಾಟಕ ಸಹಕಾರ ಮಾರಾಟ ಮಂಡಳಿಗಳು ಪಡೆಯುವ ತಲಾ 200 ಕೋಟಿ ರೂಪಾಯಿ ಬಂಡವಾಳ ಸಾಲಕ್ಕೆ ರಾಜ್ಯ ಸರ್ಕಾರದ ಖಾತ್ರಿ ನೀಡಲು ಸಂಪುಟ ಒಪ್ಪಿಗೆ ನೀಡಿದೆ ಎಂದರು.
ಶಾಸಕ ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿನ 5ನೇ ಹಣಕಾಸು ಆಯೋಗದ ಅವಧಿಯನ್ನು ನವೆಂಬರ್ ವರೆಗೆ ವಿಸ್ತರಿಸಲು ಒಪ್ಪಿಗೆ ನೀಡಲಾಗಿದೆ. ರಾಜ್ಯದ ಸಿವಿಲ್ ಸೇವೆಗಳ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲು ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯನ್ನು ಮೂರು ವರ್ಷ ಸಡಿಲಿಸುವ ಸಂಬಂಧ ರಾಜ್ಯ ಸರ್ಕಾರ ಸೆಪ್ಟೆಂಬರ್ 29ರಂದು ಹೊರಡಿಸಿದ್ದ ಆದೇಶಕ್ಕೆ ಸಂಪುಟ ಘಟನೋತ್ತರ ಅನುಮೋದನೆ ನೀಡಿದೆ ಎಂದು ಸಚಿವರು ತಿಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ: ಹೆಚ್ಚುವರಿಯಾಗಿ 15 ಯೋಜನೆ ಜಾರಿಗೆ ಹಸಿರು ನಿಶಾನೆ
