ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಧಾರಾಶಿವ್ ಜಿಲ್ಲೆಯ ಜಾತಿ ನಿಂದನೆ ಪ್ರಕರಣದ ಆರೋಪಿಗೆ ಬಾಂಬೆ ಹೈಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನು ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ದೂರುದಾರರ ಪ್ರಕಾರ, ಆರೋಪಿ ಮತ್ತು ಇತರರು ಅವರನ್ನು “ಮಂಗ್ಟ್ಯಾನೋ” ಎಂಬ ಜಾತಿ ಹೆಸರಿನಿಂದ ನಿಂದಿಸಿದ್ದರು. ಬಳಿಕ ಅವರ ಮೇಲೆ ಕಬ್ಬಿಣದ ರಾಡ್‌ಗಳಿಂದ ಹಲ್ಲೆ ಮಾಡಿದ್ದರು.ಅವರ ತಾಯಿ ಮತ್ತು ಚಿಕ್ಕಮ್ಮನ ಮೇಲೆ ಕೂಡ ಇದೇ ರೀತಿಯ ದೌರ್ಜನ್ಯ ಎಸಗಲಾಗಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಕೆ. ವಿನೋದ್ ಚಂದ್ರನ್ ಮತ್ತು ಎನ್.ವಿ. ಅಂಜಾರಿಯಾ ಅವರಿದ್ದ ನ್ಯಾಯಪೀಠವು, ಆರೋಪಿ ಬಳಸಿದ ನಿಂದನೀಯ ಪದಗಳು ಜಾತಿವಾದಿ ಸ್ವಭಾವದ್ದಾಗಿದ್ದು, ದೂರುದಾರರ ಜಾತಿ ಗುರುತಿನ ಕಾರಣದಿಂದಾಗಿ ಅವರನ್ನು ಅವಮಾನಿಸುವ ಉದ್ದೇಶವನ್ನು ಹೊಂದಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ ಎಂದು ಹೇಳಿದೆ.
‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ, 1989ರ ಸೆಕ್ಷನ್ 18 ನಿರೀಕ್ಷಣಾ ಜಾಮೀನಿಗಾಗಿ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (CrPC) ಸೆಕ್ಷನ್ 438ರ ಬಳಕೆಯನ್ನು ಸ್ಪಷ್ಟವಾಗಿ ನಿಷೇಧಿಸುತ್ತದೆ ಎಂದು ನ್ಯಾಯಾಲಯ ಗಮನಸೆಳೆದಿದೆ. ಕಾಯ್ದೆಯ ಸೆಕ್ಷನ್ 3ರ ಅಡಿಯಲ್ಲಿ ಆರೋಪಿ ಅಪರಾಧವನ್ನು ಮಾಡಿಲ್ಲ ಎಂದು ಮೇಲ್ನೋಟಕ್ಕೆ ಕಂಡುಬಂದರೆ ಮತ್ತು ಆರೋಪಗಳು ಪ್ರಾಥಮಿಕ ಅರ್ಹತೆಯನ್ನು ಹೊಂದಿಲ್ಲ ಎಂದು ಕಂಡುಬಂದರೆ ಮಾತ್ರ ಆಗ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡಲು ವಿವೇಚನೆಯನ್ನು ಚಲಾಯಿಸಲು ಅವಕಾಶವಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.