Friday, October 17, 2025

ಜಾತಿಗಣತಿ ವಿವಾದ | 33 ಜಾತಿ ಪಟ್ಟಿಯಿಂದ ಹೊರಗೆ, ಮತಾಂತರ ಆದವರಿಗೆ ಮೂಲ ಜಾತಿ ಅನ್ವಯ ಇಲ್ಲ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಜಾತಿಗಣತಿ ಸಮೀಕ್ಷೆ ಪ್ರಾರಂಭದ ಮುನ್ನವೇ ಸರ್ಕಾರಕ್ಕೆ ಬಂದಿದ್ದ ತೀವ್ರ ಒತ್ತಡ ಮತ್ತು ವಿರೋಧದ ಹಿನ್ನೆಲೆ, ಹಿಂದುಳಿದ ಆಯೋಗ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಕ್ರೈಸ್ತರೊಂದಿಗೆ ಹಲವು ಹಿಂದು ಜಾತಿಗಳ ಉಲ್ಲೇಖಕ್ಕೆ ವಿರೋಧ ವ್ಯಕ್ತವಾದ ಕಾರಣ, ಆಯೋಗವು 33 ಜಾತಿಗಳನ್ನು ಪಟ್ಟಿಯಿಂದ ಕೈಬಿಟ್ಟಿದೆ.

ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್ ಮತ್ತು ಆಯುಕ್ತ ದಯಾನಂದ ಸೋಮವಾರ ವಿವರಗಳನ್ನು ಹಂಚಿಕೊಂಡು, ಹಿಂದಿನ ಸಮೀಕ್ಷೆಗಳಲ್ಲಿ “ಕ್ರಿಶ್ಚಿಯನ್” ಎಂದು ದಾಖಲಾಗಿದ್ದ ಕಾರಣ ಈ ಬಾರಿ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಆದರೆ ಮಾಧ್ಯಮಗಳಲ್ಲಿ ಈ ವಿಚಾರ ಚರ್ಚೆಗೆ ಕಾರಣವಾದ ನಂತರ ಗೊಂದಲ ಉಂಟಾದ ಜಾತಿಗಳ ಹೆಸರನ್ನು ಈಗ ತೆಗೆದುಹಾಕಲಾಗಿದೆ ಎಂದು ಅವರು ತಿಳಿಸಿದರು.

ಅಧಿಕಾರಿಗಳ ಪ್ರಕಾರ, 1561 ಜಾತಿಗಳನ್ನು ಬಿಟ್ಟು ಬೇರೆ ಯಾವುದೇ ಜಾತಿ ಇದ್ದರೂ ಮಾಹಿತಿ ನೀಡಲು ಅವಕಾಶವಿದೆ. “ಯಾರು ಯಾವ ಜಾತಿ ಬೇಕಾದರೂ ಬರೆಸಬಹುದು. ಜಾತಿ ಹೇಳುವುದಿಲ್ಲ ಎಂದರೂ ಅವಕಾಶ ಇದೆ. ‘ಇತರೇ’ ಅಂತಲೂ ಕಾಲಂ ನೀಡಲಾಗಿದೆ” ಎಂದು ಆಯೋಗ ಸ್ಪಷ್ಟಪಡಿಸಿದೆ.

ಕ್ರಿಶ್ಚಿಯನ್ ಒಕ್ಕಲಿಗ, ಲಿಂಗಾಯತ ಮುಂತಾದವರು ಇದ್ದರೆ ತಮ್ಮ ಇಚ್ಛೆಯಿಂದ ದಾಖಲಿಸಬಹುದು. ಆದರೆ ಇವು ಪಟ್ಟಿ ಡ್ರಾಪ್‌ಔಟ್‌ನಿಂದ ಮಾತ್ರ ತೆಗೆದುಹಾಕಲ್ಪಟ್ಟಿವೆ, ಸಂಪೂರ್ಣವಾಗಿ ರದ್ದುಗೊಂಡಿಲ್ಲ. ಪ್ರಾಟೆಸ್ಟೆಂಟ್ ಕ್ರೈಸ್ತ, ಸಿರಿಯನ್ ಕ್ರೈಸ್ತ, ಎಸ್‌ಸಿ ಮತಾಂತರ ಕ್ರೈಸ್ತ ಮುಂತಾದ ವರ್ಗಗಳು ಉಳಿಯುತ್ತವೆ. ಆದರೆ ಬ್ರಾಹ್ಮಣ, ಮುಸ್ಲಿಂ, ಜೈನ್ ಮೊದಲಾದ ಜಾತಿಗಳಿಗೆ ಯಾವುದೇ ವಿರೋಧ ವ್ಯಕ್ತವಾಗಿಲ್ಲದ ಕಾರಣ ಅವನ್ನು ಮುಂದುವರಿಸಲಾಗಿದೆ.

ಸಮೀಕ್ಷೆ ಪೂರ್ಣಗೊಂಡ ನಂತರ ತಜ್ಞರು ಎಲ್ಲಾ ಮಾಹಿತಿಗಳನ್ನು ವಿಶ್ಲೇಷಿಸಿ, ಯಾರು ಯಾವ ವರ್ಗಕ್ಕೆ ಸೇರುತ್ತಾರೆ ಎಂಬುದನ್ನು ಅಂತಿಮವಾಗಿ ಪಟ್ಟಿ ಮಾಡಲಿದ್ದಾರೆ. ಮತಾಂತರಗೊಂಡವರು ತಮ್ಮ ಹೊಸ ಧರ್ಮದಲ್ಲೇ ದಾಖಲಾಗುತ್ತಾರೆ, ಮೂಲ ಜಾತಿಗೆ ಅನ್ವಯವಾಗುವುದಿಲ್ಲ. ಆಯೋಗ ಸ್ವತಂತ್ರ ಸಂಸ್ಥೆಯಾಗಿರುವುದರಿಂದ ಸರ್ಕಾರದ ಹಸ್ತಕ್ಷೇಪವಿಲ್ಲ ಎಂದು ನಾಯಕ್ ಸ್ಪಷ್ಟಪಡಿಸಿದರು.

error: Content is protected !!