ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿಯಲ್ಲಿ ಅಕ್ಟೋಬರ್ 3ರಿಂದ ಜಾತಿಗಣತಿ ಸಮೀಕ್ಷೆ ಪ್ರಾರಂಭವಾಗಲಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ ರಾವ್ ತಿಳಿಸಿದ್ದಾರೆ.
ಸಮೀಕ್ಷೆಯ ಬಗ್ಗೆ ಮಾಹಿತಿ ನೀಡಿದ ಅವರು, “ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ದಿನಾಂಕ ನಿಗದಿಯಾಗಿದೆ. ಸದ್ಯ ಸಮೀಕ್ಷಾ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದ್ದು, ಅಕ್ಟೋಬರ್ 3ರೊಳಗೆ ತರಬೇತಿ ಪೂರ್ಣಗೊಳ್ಳಲಿದೆ. ಬಳಿಕ ಸಮೀಕ್ಷೆ ಪ್ರಾರಂಭವಾಗಲಿದೆ” ಎಂದು ಹೇಳಿದರು.
ಈ ಮೊದಲು ಸಿಬ್ಬಂದಿ ಕೊರತೆಯಿಂದ ಬೆಂಗಳೂರಿನಲ್ಲಿ ಸಮೀಕ್ಷೆ ಪ್ರಾರಂಭಿಸಲು ತಡವಾಗಿತ್ತು. ಈಗ ದಿನಾಂಕ ನಿಗದಿಯಾದ ಹಿನ್ನೆಲೆಯಲ್ಲಿ ಕಾರ್ಯ ಚುರುಕುಗೊಂಡಿದೆ. ರಾಜ್ಯದ ಇತರ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 22ರಿಂದ ಸಮೀಕ್ಷೆ ಆರಂಭವಾಗಿ ಅಕ್ಟೋಬರ್ 7ರವರೆಗೆ ಮುಂದುವರಿಯಲಿದೆ.
ಒಟ್ಟಿನಲ್ಲಿ, ತಾಂತ್ರಿಕ ತೊಂದರೆಯಿಂದ ತಡವಾದ ಜಾತಿಗಣತಿ ಸಮೀಕ್ಷೆ ಇದೀಗ ಬೆಂಗಳೂರಿನಲ್ಲಿ ಅ.3ರಿಂದ ಅಧಿಕೃತವಾಗಿ ಆರಂಭವಾಗಲಿದೆ.