ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಕಾಂಗ್ರೆಸ್ ಸರ್ಕಾರ ಆತುರಾತುರವಾಗಿ ಜಾತಿ ಗಣತಿ ಮಾಡುತ್ತಿದ್ದು, ಭವಿಷ್ಯದಲ್ಲಿ ಇದು ದೊಡ್ಡ ಸಮಸ್ಯೆಗೆ ಕಾರಣವಾಗಲಿದೆ. ಇದರ ಪ್ರತಿಫಲವನ್ನು ಕಾಂಗ್ರೆಸ್ ಪಕ್ಷ ಅನುಭವಿಸಲಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಬೆಂಗಳೂರಿನಲ್ಲಿ ಶನಿವಾರ ಸಮೀಕ್ಷೆ ಕುರಿತ ಒಕ್ಕಲಿಗ ಸಮುದಾಯದ ಜಾಗೃತಿ ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, ಸಭೆಯಲ್ಲಿ ಎಲ್ಲಾ ಸಾಧಕ – ಬಾಧಕಗಳ ಬಗ್ಗೆ ಚರ್ಚೆ ಮಾಡೆಲಾಗಿದೆ. ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಎಲ್ಲ ಸಮಸ್ಯೆ ಬಗೆಹರಿಸುವ ಬಗ್ಗೆ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಈಗಾಗಲೇ ಕಾಂತರಾಜ್ ಆಯೋಗ, ಜಯಪ್ರಕಾಶ್ ಹೆಗಡೆ ಆಯೋಗ ಆಯಿತು. ಈಗ ಮೂರನೇ ಆಯೋಗ ರಚನೆ ಆಗಿದೆ. ಈ ರೀತಿಯ ಆಯೋಗ ರಚನೆ ಮಾಡಬೇಕಾದರೆ ಏನೆಲ್ಲ ಮಾನದಂಡಗಳನ್ನು ಅನುಸರಿಸಿದ್ದಾರೆ ಎಂಬುದನ್ನು ನೋಡಬೇಕು. ಸುಖಾ ಸುಮ್ಮನೆ ಆಯೋಗ ರಚನೆ ಮಾಡಲು ಸಾಧ್ಯವಿಲ್ಲ ಎಂದರು.
ಸಮೀಕ್ಷೆಗೆ 15 ದಿನಗಳ ಅವಕಾಶ ಕೊಟ್ಟಿದ್ದಾರೆ. ಅದರಲ್ಲಿ 9 ದಿನ ನವರಾತ್ರಿ ಬರುತ್ತದೆ, ಉಳಿದ 6 ದಿನಗಳಲ್ಲಿ ಆಯೋಗ ಏನು ವರದಿ ಕೊಡಲು ಸಾಧ್ಯ? ಹಾಗಾದರೆ ಇವರು ಕಾಂತರಾಜ್ ವರದಿಯನ್ನೇ ಭಟ್ಟಿ ಇಳಿಸುತ್ತಾರಾ? ಎಂದು ಪ್ರಶ್ನಿಸಿದರು.
ಸರ್ಕಾರದಿಂದ ಸಮೀಕ್ಷೆಯಲ್ಲಿ ಅನ್ಯಾಯವಾದರೆ ಸ್ವಾಮೀಜಿಗಳ ನೇತೃತ್ವದಲ್ಲಿ ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ಚರ್ಚೆ ಮಾಡಿದ್ದೇವೆ. ಇದು ಸಣ್ಣ ಮಟ್ಟದ ಸಭೆ ಅಷ್ಟೇ. ಈ ಸರ್ಕಾರ ಬೆಂಕಿ ಹಚ್ಚಲು ಏನ್ ಬೇಕೋ ಅದನ್ನು ಮಾಡಿದೆ. ಇದರ ಪ್ರತಿಪ್ರಲ ಮುಂದೆ ಗೊತ್ತಾಗುತ್ತದೆ. ವಾಸ್ತವಾಂಶದ ಬಗ್ಗೆ ಮಾತ್ರ ಚರ್ಚೆ ಆಗಬೇಕು ಎಂದು ಕಿಡಿಕಾರಿದರು.
ಜಾತಿ ವಿಚಾರದಲ್ಲಿ ಒಕ್ಕಲಿಗರಿಗೆ ದೊಡ್ಡಮಟ್ಟದ ಪೆಟ್ಟು ಬಿದ್ದಿದೆ. ಬೆಂಗಳೂರಿನಲ್ಲಿ ಹೆಚ್ಚು ಭೂಮಿಯನ್ನು ಕಳೆದುಕೊಂಡಿದ್ದು ಒಕ್ಕಲಿಗರ ಸಮಾಜ. ಡಿ.ಕೆ ಶಿವಕುಮಾರ್ ಎಲ್ಲಾ ಸಮಸ್ಯೆ ಬಗೆಹರಿಸಲು ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಮುಂದೆ ನೋಡೋಣ, ಏನಾಗುತ್ತದೆ ಅಂತ. ಇದು ಇನ್ನೊಂದು ಕಾಂತರಾಜ್ ವರದಿ ಅಲ್ಲ, ಅದಕ್ಕಿಂತಲೂ ಕೆಟ್ಟದಾಗಿ ಇರುತ್ತದೆ ಎಂದು ದೂರಿದರು.