ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ದಳಪತಿ ವಿಜಯ್ ಅವರ ಸಿನಿಮಾ ಬದುಕಿನ ಕೊನೆಯ ಚಿತ್ರ ಎನ್ನಲಾದ ‘ಜನ ನಾಯಗನ್’ ಬಿಡುಗಡೆಗೆ ಎದುರಾಗಿರುವ ಅಡೆತಡೆಗಳು ಈಗ ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿವೆ. ಜನವರಿ 09 ರಂದು ತೆರೆಗೆ ಬರಬೇಕಿದ್ದ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಪ್ರಮಾಣಪತ್ರ ನಿರಾಕರಿಸಿರುವುದು ಈಗ ಕಾನೂನು ಹೋರಾಟಕ್ಕೆ ನಾಂದಿ ಹಾಡಿದೆ.
ಸಿನಿಮಾದಲ್ಲಿನ ರಾಜಕೀಯ ಅಂಶಗಳ ಕಾರಣಕ್ಕೆ ಕೇಂದ್ರ ಸರ್ಕಾರವು ಉದ್ದೇಶಪೂರ್ವಕವಾಗಿ ಪ್ರಮಾಣಪತ್ರ ನೀಡಲು ವಿಳಂಬ ಮಾಡುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಈ ವಿಳಂಬವನ್ನು “ರಾಜಕೀಯ ಪ್ರೇರಿತ ನಡೆ” ಎಂದು ಕರೆದಿರುವ ತಮಿಳುನಾಡು ಕಾಂಗ್ರೆಸ್ ನಾಯಕರು, ವಿಜಯ್ ಪರವಾಗಿ ಧ್ವನಿ ಎತ್ತಿದ್ದಾರೆ.
“ತಮಿಳು ಸಂಸ್ಕೃತಿ ಮತ್ತು ಸಿನಿಮಾವನ್ನು ತುಳಿಯಲು ಪ್ರಯತ್ನಿಸಬೇಡಿ ಎಂದು ಒಂಬತ್ತು ವರ್ಷಗಳ ಹಿಂದೆಯೇ ರಾಹುಲ್ ಗಾಂಧಿ ಅವರು ಮೋದಿಯವರಿಗೆ ಎಚ್ಚರಿಸಿದ್ದರು. ಈಗ ವಿಜಯ್ ಸಿನಿಮಾ ತಡೆಯುವ ಮೂಲಕ ಮತ್ತೊಮ್ಮೆ ತಮಿಳು ಜನರಿಗೆ ಅವಮಾನ ಮಾಡಲಾಗಿದೆ,” ಎಂದು ಪ್ರವೀಣ್ ಚಕ್ರವರ್ತಿ ಕಿಡಿಕಾರಿದ್ದಾರೆ.
“ಇದು ಕೇವಲ ಒಂದು ಸಿನಿಮಾ ಮೇಲಿನ ದಾಳಿಯಲ್ಲ, ವಾಕ್ ಸ್ವಾತಂತ್ರ್ಯ ಮತ್ತು ಕ್ರಿಯಾತ್ಮಕ ಸ್ವಾತಂತ್ರ್ಯದ ಹರಣ. ರಾಜಕೀಯ ಕಾರಣಕ್ಕಾಗಿ ನೂರಾರು ಜನರ ಶ್ರಮವನ್ನು ವ್ಯರ್ಥ ಮಾಡುವುದು ಅಪಾಯಕಾರಿ,” ಎಂದು ಸಂಸದೆ ಜೋತಿಮಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯ್ ಅವರು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷದ ವಿರುದ್ಧವೇ ರಾಜಕೀಯವಾಗಿ ತೊಡೆತಟ್ಟಿದ್ದಾರೆ. ಹೀಗಿದ್ದರೂ, ಡಿಎಂಕೆಯ ಮಿತ್ರಪಕ್ಷವಾದ ಕಾಂಗ್ರೆಸ್, ವಿಜಯ್ ಅವರ ಬೆಂಬಲಕ್ಕೆ ನಿಂತಿರುವುದು ರಾಜಕೀಯ ವಿಶ್ಲೇಷಕರಲ್ಲಿ ಅಚ್ಚರಿ ಮೂಡಿಸಿದೆ. ಇದು ತಮಿಳುನಾಡು ರಾಜಕೀಯದ ಮುಂದಿನ ಬದಲಾವಣೆಯ ಮುನ್ಸೂಚನೆಯೇ ಎಂಬ ಚರ್ಚೆಗಳು ಶುರುವಾಗಿವೆ.

